ದಾವಣಗೆರೆ, ಜು.24- ನಗರ ವ್ಯಾಪ್ತಿಯ ಹೊಸ ಚಿಕ್ಕನಹಳ್ಳಿಯಲ್ಲಿ ಮುಂದೆ ನಡೆಯಲಿದ್ದ ಅಪ್ರಾಪ್ತೆಯ ಬಾಲ್ಯ ವಿವಾಹವನ್ನು ಡಾನ್ ಬಾಸ್ಕೋ ಮಕ್ಕಳ ಸಹಾಯವಾಣಿ ಕೊಲ್ಯಾಬ್ ತಂಡ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳಿಂದ ತಡೆ ಹಿಡಿಯಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಕೋಗುಂಡೆ ಗ್ರಾಮ ಮೂಲದ 26 ವರ್ಷದ ಯುವಕನೊಂದಿಗೆ ಇಷ್ಟರಲ್ಲೇ ಮದುವೆ ನಡೆಸಲು ಸಿದ್ದತೆ ನಡೆದಿದ್ದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಬಾಲಕಿಯ ಮನೆಗೆ ತೆರಳಿ ಬಾಲಕಿಯ ಜನ್ಮ ದಿನಾಂಕಕ್ಕೆ ಸಂಬಂಧಿಸಿದ ಮಾಹಿತಿ ಪರಿಶೀಲಿಸಿ ನೋಡಲಾಗಿ ಬಾಲಕಿಯ ವಯಸ್ಸು ಹದಿ ನಾಲ್ಕು ವರ್ಷ ಐದು ತಿಂಗಳಾಗಿದೆ ಎಂದು ತಿಳಿದು ಬಂದಿದೆ.
ಬಾಲ್ಯ ವಿವಾಹ ನಿಷೇಧ ಕಾಯ್ದೆ ಪ್ರಕಾರ ಬಾಲ್ಯ ವಿವಾಹ ಮಾಡಿದರೆ ಒಂದು ಲಕ್ಷ ರೂ. ದಂಡ, ಒಂದು ವರ್ಷಕ್ಕೆ ಕಡಿಮೆಯಿಲ್ಲದಂತೆ ಎರಡು ವರ್ಷಕ್ಕೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯಾಗಲಿದೆ ಎಂಬುದಾಗಿ ಪೋಷಕರಿಗೆ ಎಚ್ಚರಿಸಿದ್ದಲ್ಲದೇ, ಕಾನೂನಿನ ಬಗ್ಗೆ ಅರಿವು ಮೂಡಿಸಿ ಮುಚ್ಚಳಿಕೆ ಪತ್ರ ಪಡೆದು ಅಪ್ರಾಪ್ತೆಯ ಬಾಲ್ಯ ವಿವಾಹವನ್ನು ತಡೆದಿದ್ದಾರೆ.
ಈ ಸಂದರ್ಭದಲ್ಲಿ ಡಾನ್ ಬಾಸ್ಕೋ ಮಕ್ಕಳ ಸಹಾಯವಾಣಿ ಕೊಲ್ಯಾಬ್ ತಂಡದ ಸಂಯೋಜಕ ಟಿ.ಎಂ. ಕೊಟ್ರೇಶ್, ಮಕ್ಕಳ ಸಹಾಯ ವಾಣಿ ಕಾರ್ಯರ್ತ ಡಿ. ಮಂಜುನಾಥ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯ ಶಿಶು ಅಭಿವೃದ್ಧಿ ಯೋಜನಾ ಧಿಕಾರಿ ಧರಣಿಕುಮಾರ್, ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಗಂಗಾಧರಯ್ಯ, ಮೇಲ್ವಿಚಾರಕರಾದ ಕವಿತ, ಅಂಗನವಾಡಿ ಕಾರ್ಯಕರ್ತೆ ಕವಿತ ಹಾಗೂ ಸಹಾಯಕರಾದ ನೇತ್ರಾವತಿ, ಕುಮಾರ್ ಇದ್ದರು.