ದಾವಣಗೆರೆ, ಜೂ.21- ಟೀ ವ್ಯಾಪಾರಿಯೋರ್ವ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿ ರುವ ಘಟನೆ ಬಸವಾ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ವಿನೋಬನಗರದ ವಾಸಿ ಎಚ್.ಜಿ. ಪ್ರಕಾಶ್ (50) ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಇವರು ಮೂಲತಃ ಚನ್ನಗಿರಿ ತಾಲ್ಲೂಕಿನ ಕಂಚುಗಾರನಹಳ್ಳಿ ಯವರು. ಆ ಗ್ರಾಮದಲ್ಲಿ ಜಮೀನಿನಲ್ಲಿ ನಷ್ಟ ಮಾಡಿಕೊಂಡು ದಾವಣಗೆರೆಯ ಆರ್ ಟಿಒ ಕಛೇರಿ ಮುಂದೆ ಟೀ ಅಂಗಡಿ ನಡೆಸುತ್ತಿದ್ದರು. ಲಾಕ್ ಡೌನ್ ಪರಿಣಾಮ ಮೂರು ತಿಂಗಳಿನಿಂದ ಟೀ ಅಂಗಡಿ ಮುಚ್ಚಲಾಗಿತ್ತು.
ದುಡಿಮೆಯಿಲ್ಲದೇ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದರಿಂದ ನೊಂದಿದ್ದ ಅವರು ಶನಿವಾರ ಸಂಜೆ ಮನೆಯಿಂದ ಬೈಕ್ ನಲ್ಲಿ ಸೂಳೆಕೆರೆಗೆ ಬಂದು ಡೆತ್ ನೋಟ್ ಬರೆದಿಟ್ಟು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕೆರೆಯ ಬಳಿ ಈತನ ಬೈಕ್ ಹಾಗೂ ಜರ್ಕಿನ್ ಮತ್ತು ಚಪ್ಪಲಿ ಇಂದು ಪತ್ತೆಯಾಗಿವೆ. ಈತನ ಶವಕ್ಕಾಗಿ ಇಂದು ಅಗ್ನಿ ಶಾಮಕ, ಈಜುಗಾರರ ಸಹಾಯದಿಂದ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಕಾರ್ಯಾಚರಣೆ ಮುಂದುವರೆದಿದೆ.
ಘಟನಾ ಸ್ಥಳಕ್ಕೆ ಚನ್ನಗಿರಿ ತಾಲ್ಲೂಕಿನ ತಹಶೀಲ್ದಾರ್, ಸಿಪಿಐ, ಡಿವೈಎಸ್ಪಿ, ಬಸವಾಪಟ್ಟಣ ಠಾಣೆ ಪಿಎಸ್ ಐ ಭೇಟಿ ನೀಡಿ ಪರಿಶೀಲಿಸಿದ್ದಾರೆ.