ಹಾನಿಗೊಳಗಾಗಿದ್ದ ಕಾರಿನ ಎಡ ಭಾಗದ ಹೆಡ್ ಲೈಟ್, ಸಿಸಿ ಟಿವಿ ನೋಡಿ ಪತ್ತೆ ಹಚ್ಚಿದ ಪೊಲೀಸರು
ದಾವಣಗೆರೆ, ಜೂ.12- ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ರೊಪ್ಪದಹಟ್ಟಿ ಬಳಿ ಬೈಕ್ನಲ್ಲಿ ತೆರಳುತ್ತಿದ್ದ ಮೂವರ ಸಾವಿಗೆ ಕಾರಣವಾಗಿದ್ದ ವಾಹನ ಹಾಗೂ ಚಾಲಕನನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಕೇವಲ ನಾಲ್ಕೂವರೆ ಗಂಟೆಗಳಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ರೊಪ್ಪದಹಟ್ಟಿ ಬಳಿ ಇದಾಯತ್ ಉಲ್ಲಾ, ಸೈಫುಲ್ಲಾ ಹಾಗೂ ರಂಗಪ್ಪ ಎಂಬುವರು ಮೃತಪಟ್ಟಿದ್ದರು. ಪೊಲೀಸರು ಸ್ವಲ್ಪ ನಿರ್ಲಕ್ಷ್ಯ ವಹಿಸಿದ್ದರೂ ಅಪಘಾತ ಎಸಗಿದ್ದ ಕಾರು ಪತ್ತೆಯಾಗುವುದು ಕಷ್ಟವಾಗುತ್ತಿತ್ತು. ತುಂಬಾ ಚಾಣಾಕ್ಷತನದಿಂದ ಚಾಲಕ ಹಾಗೂ ಕಾರನ್ನು ಪತ್ತೆ ಹಚ್ಚಲಾಗಿದೆ. ಚಾಲಕ ಮಹಾರಾಷ್ಟ್ರ ಮೂಲದವನಾಗಿದ್ದು, ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿರುವುದರಿಂದ ವರದಿ ಬಾರದ ಕಾರಣ ಚಾಲಕನ ಹೆಸರು ಬಹಿರಂಗಪಡಿಸಿಲ್ಲ.
ಘಟನೆ ಹಿನ್ನೆಲೆ : ಜೂ. 10ರ ರಾತ್ರಿ 8 ಗಂಟೆ ಸುಮಾರಿಗೆ ಮೂವರು ವ್ಯಕ್ತಿಗಳು ಬೈಕ್ನಲ್ಲಿ ತೆರಳುತ್ತಿರುವಾಗ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲಿ ವಾಹನ ನಿಲ್ಲಿಸದೆ ಕಾರು ಚಾಲಕ ಪರಾರಿಯಾಗಿದ್ದ.
ಕೂಡಲೇ ಅಪಘಾತ ಸ್ಥಳಕ್ಕೆ ಪಿಎಸ್‌ಐ ಆಗಮಿಸಿದ್ದರು. ಈ ವೇಳೆ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಮತ್ತೋರ್ವ ಗಾಯಗೊಂಡಿದ್ದು, ತಕ್ಷಣವೇ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದ. ಅಪಘಾತ ಸ್ಥಳದಲ್ಲಿ ಹಾನಿಗೊಳಗಾದ ಹೆಡ್ ಲೈಟ್ ಮತ್ತು ಕಾರಿನ ಇತರೆ ಸಣ್ಣ ಪೀಸ್‌ಗಳು ಸಿಕ್ಕಿದ್ದವು. ಮೃತ ದೇಹವೊಂದು 60 ಅಡಿ ದೂರದಲ್ಲಿ ಬಿದ್ದ ಕಾರಣ ಇದು ವೇಗದ ಚಾಲನೆಯಿಂದ ಆಗಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದರು. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿತ್ತು.
ಪತ್ತೆ ಹಚ್ಚಿದ್ದು ಹೇಗೆ ? : ವಾಹನ ಬೆನ್ನತ್ತಿದ ಪೊಲೀಸರು ಮಾರ್ಗ ಮಧ್ಯೆ ಸಿಸಿಟಿವಿ ಪರಿಶೀಲನೆಗೆ ಇಳಿದರು. ಹಾನಿಗೊಳಗಾದ ಎಡ ಭಾಗದ ಹೆಡ್ಲೈಟ್ನೊಂದಿಗೆ ವಾಹನ ಪತ್ತೆ ಹಚ್ಚಲು ಮುಂದಾದರು.
ಹತ್ತರಿಂದ ಹನ್ನೆರಡು ಸಿಸಿಟಿವಿ ಹುಡುಕಾಡಿದರು. ಪಾಂಡೋಮಟ್ಟಿ, ಗೊಪ್ಪೇನಹಳ್ಳಿ ಮತ್ತು ಇತರೆ ಹಳ್ಳಿಗಳ ಕಡೆಗೆ ಉಪ ಮಾರ್ಗಗಳಲ್ಲಿ ಹೋದ ವಾಹನವನ್ನು ಹುಡುಕಲು ಆರಂಭಿಸಿದರು. ಮುಂಭಾಗ ಹಾನಿಗೊಳಗಾದ ವಾಹನಕ್ಕಾಗಿ ಪ್ರತಿ ಗ್ಯಾರೇಜ್ ಪರಿಶೀಲಿಸುತ್ತಾ ಹೊರಟರು. ಡಿವೈಎಸ್ಪಿ ಹಾಗೂ ಪಿಎಸ್ಐ ನೇತೃತ್ವದ ತಂಡ ವಾಹನ ಹೋದ ಕಡೆ ಸಿಸಿಟಿವಿಯ ದೃಶ್ಯಾವಳಿಯಲ್ಲಿ ಸೆರೆಯಾದ ಮಾಹಿತಿ ಪಡೆಯುತ್ತಾ ಕಾರ್ಯಾಚರಣೆ ಮುಂದುವರಿಸಿತು.
ಅಜ್ಜಂಪುರ ಸಮೀಪದ ಬುಕ್ಕಾಂಬೂದಿ ಬಳಿ ಅಪಘಾತ ಎಸಗಿದ ವಾಹನ ಇರುವ ಬಗ್ಗೆ ಪೊಲೀಸರಿಗೆ ಗೊತ್ತಾಗಿದೆ. ಆದ್ರೆ ಚಾಲಕ ಮಾತ್ರ ಕಾರು ಟ್ರಕ್‌ಗೆ ಡಿಕ್ಕಿಯಾಗಿದೆ. ಹಾಗಾಗಿ ಕಾರು ಡ್ಯಾಮೇಜ್ ಆಗಿದೆ ಎಂದು ಸುಳ್ಳು ಹೇಳಿ ರಿಪೇರಿ ಮಾಡಿಸಲು ಮುಂದಾಗಿದ್ದ. ತಡ ಮಾಡದೆ ಸ್ಥಳಕ್ಕೆ ಬಂದ ಪೊಲೀಸರಿಗೆ ಅಪಘಾತ ಆದ ಸ್ಥಳದಲ್ಲಿ ದೊರೆತ ಸಾಕ್ಷ್ಯಾಧಾರಗಳು ಹಾನಿಗೊಳಗಾದ ಕಾರಿಗೆ ಹೊಂದಿಕೆಯಾಗುತ್ತಿದ್ದು ಗೊತ್ತಾಗಿದೆ. ರಾತ್ರಿ 8 ಗಂಟೆಗೆ ಶುರು ಮಾಡಿದ ಕಾರ್ಯಾಚರಣೆ ಮುಗಿಯುವ ಹೊತ್ತಿಗೆ 12 ಗಂಟೆ 30 ನಿಮಿಷ ಆಗಿತ್ತು. ಚಾಲಕ ಹಾಗೂ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಡ್ಯ ಮೂಲದ ಕುಟುಂಬ ಮಹಾರಾಷ್ಟ್ರದಿಂದ ಕಾರು ಬಾಡಿಗೆ ಮಾಡಿಕೊಂಡು ಬರುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ. ರಿಪೇರಿ ಮಾಡಿಸಿಕೊಂಡು ಮಹಾರಾಷ್ಟ್ರಕ್ಕೆ ಹೋದರೆ ಸಿಕ್ಕಿಬೀಳೋದಿಲ್ಲ ಎಂದುಕೊಂಡು ಚಾಲಾಕಿ ಚಾಲಕ ನಾಟಕ ಆಡಿದ್ದ. ಆದರೂ ಅಪಘಾತ ನಡೆದ ಕೇವಲ ನಾಲ್ಕೂವರೆ ಗಂಟೆಗಳಲ್ಲಿಯೇ ವಾಹನ ಪತ್ತೆ ಹಚ್ಚಲಾಗಿದೆ.