ಹೊನ್ನಾಳಿ ಸರ್ಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್ ಸೇರಿ ನಾಲ್ವರ ಬಂಧನ
ದಾವಣಗೆರೆ, ಮೇ 26- ಹೆತ್ತಮ್ಮನೇ ತನ್ನ 5 ದಿನದ ಗಂಡು ಮಗುವನ್ನು ಹಣಕ್ಕೆ ಮಾರಾಟ ಮಾಡಿದ ಹೃದಯವಿದ್ರಾವಕ ಘಟನೆ ನಡೆದಿದ್ದು, ಈ ಸಂಬಂಧ ಸರ್ಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್ ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಹೊನ್ನಾಳಿ ಪೊಲೀಸರು ಬಂಧಿಸಿದ್ದಾರೆ.
ಹೊನ್ನಾಳಿಯ ಸಾರ್ವಜನಿಕ ಆಸ್ಪತ್ರೆಯ ಸ್ಟಾಫ್ ನರ್ಸ್ ಕುಮಾರ, ಹೊನ್ನಾಳಿ ಪಟ್ಟಣದ ವಾಸಿ, ಹಿರೇಕೆರೂರು ಸರ್ಕಾರಿ ಆಸ್ಪತ್ರೆಯಲ್ಲಿ ಕಂಟ್ರ್ಯಾಕ್ಟ್ ಬೇಸಿಸ್ ಡಯಾಲಿಸಿಸ್ ಟೆಕ್ನೀಷಿಯನ್ ಬಸವರಾಜ ಹಾಗೂ ಮಗುವನ್ನು ಮಾರಾಟಕ್ಕೆ ತೆಗೆದುಕೊಂಡಿದ್ದ ದಾವಣಗೆರೆಯ ಡಿ.ಎಸ್. ಅಣ್ಣೇಶನಾಯ್ಕ, ಪಿ. ಲಾವಣ್ಯ ಬಂಧಿತರು.
ಮತ್ತೋರ್ವ ಆರೋಪಿ ಮಹೇಶ ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿದೆ. ಆರೋಪಿ ನಿಂಗಮ್ಮಳನ್ನು ವಿಚಾರಿಸಲಾಗಿದ್ದು, ಇವರು ಬಾಣಂತಿ ಯಾಗಿದ್ದರಿಂದ ಇವರ ಮಗು ಪೋಷಣೆಗಾಗಿ ಜಿಲ್ಲಾ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ವಶದಲ್ಲಿದೆ.
ಹೊನ್ನಾಳಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಸ್ಟಾಫ್ ನರ್ಸ್ ಕುಮಾರ, `ಡಿ’ ಗ್ರೂಪ್ ನೌಕರ ಮಹೇಶ ಮತ್ತು ಹಿರೇಕೆರೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಲ್ಯಾಬ್ ಟೆಕ್ನೀಷಿಯನ್ ಬಸವರಾಜ ಎಂಬುವರ ಕುಮ್ಮಕ್ಕಿನಿಂದ ನ್ಯಾಮತಿ ತಾಲ್ಲೂಕು ಕುರುವ ಗ್ರಾಮದ ನಿಂಗಮ್ಮ ಎಂಬಾಕೆ ಹೊನ್ನಾಳಿ ಸರ್ಕಾರಿ ಆಸ್ಪತ್ರೆಯಲ್ಲಿ ಇದೇ 20ರಂದು ತನಗೆ ಜನಿಸಿದ್ದ ತನ್ನ 5 ದಿನದ ಗಂಡು ಮಗುವನ್ನು 5 ಸಾವಿರ ರೂ.ಗೆ ಕಾನೂನು ಬಾಹಿರವಾಗಿ ತನ್ನ ಸಂಬಂಧಿಕರಲ್ಲದ ದಾವಣಗೆರೆ ನಗರದ ಅಣ್ಣೇಶನಾಯ್ಕ ಮತ್ತು ಅವರ ಅಕ್ಕ ಲಾವಣ್ಯ ಎಂಬುವವರಿಗೆ ಹೊನ್ನಾಳಿ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಎದುರಿಗೆ ಮಾರಾಟ ಮಾಡಿದ್ದಾಳೆ.
ಈ ಸಂಬಂಧ ಹೊನ್ನಾಳಿ ತಾಲ್ಲೂಕಿನ ಶಿಶು ಅಭಿವೃದ್ದಿ ಅಧಿಕಾರಿ ಮಹಾಂತಸ್ವಾಮಿ ಪೂಜಾರ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಘಟನೆ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಕೂಡಲೇ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮಕ್ಕೆ ಸೂಚಿಸಿದ ಮೇರೆಗೆ ಚನ್ನಗಿರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಶಾಂತ್ ಜಿ.ಮನ್ನೋಳಿ ನೇತೃತ್ವದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಟಿ.ವಿ. ದೇವರಾಜ್, ಪೊಲೀಸ್ ಉಪ-ನಿರೀಕ್ಷಕ ಟಿ.ಎನ್. ತಿಪ್ಪೇಸ್ವಾಮಿ ಮತ್ತು ಸಿಬ್ಬಂದಿಗಳ ತಂಡವು ಆರೋಪಿಗಳನ್ನು ಬಂಧಿಸಿದೆ.