ಆನ್‌ಲೈನ್ ಮುಖೇನ ಲಕ್ಷ ರೂ. ಗುಳುಂ

ದಾವಣಗೆರೆ, ಮೇ 26- ಪೇ ಟಿಎಂ ಅಧಿಕಾರಿ ಸೋಗಿನಲ್ಲಿ ಟವರ್ ಕಂಪನಿಯ ಪ್ರಧಾನ ವ್ಯವಸ್ಥಾಪಕ ನೋರ್ವರನ್ನು ನಂಬಿಸಿ, ಬ್ಯಾಂಕ್ ಖಾತೆಯಲ್ಲಿದ್ದ 1 ಲಕ್ಷಕ್ಕೂ ಅಧಿಕ ಹಣವನ್ನು ಆನ್‌ಲೈನ್ ಮುಖೇನ ದೋಚಿ ವಂಚಿಸಿರುವ ಬಗ್ಗೆ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಗರದ ಕರೂರಿನಲ್ಲಿರುವ ಷಾ ಇನ್ಫ್ರಾ ಟವರ್ಸ್‌ನ ಪ್ರಧಾನ ವ್ಯವಸ್ಥಾಪಕ ಧೀರೇಂದ್ರ ಪ್ರತಾಪ್ ಸಿಂಗ್ ವಂಚನೆಗೊಳಗಾದವರು.

ಎಸ್‌ಬಿಐ ಕ್ರೆಡಿಟ್ ಕಾರ್ಡ್ ಹೊಂದಿದ್ದು, ಮಹಾರಾಷ್ಟ್ರದ ಪೂನಾ ನಗರದಲ್ಲಿ ಹೆಚ್‌ಡಿಎಫ್‌ಸಿ ಬ್ಯಾಂಕ್ ಖಾತೆ ಹೊಂದಿದ್ದು, ದೈನಂದಿನ ವ್ಯವಹಾರಕ್ಕಾಗಿ ಪೇ ಟಿಎಂ ಖಾತೆ ಹೊಂದಲಾಗಿದೆ. ಸೋಮವಾರ ನಗರದ ಎಸ್.ಎಸ್.ಲೇಔಟ್ ನಲ್ಲಿನ ಮನೆಯಲ್ಲಿದ್ದಾಗ ಮೊಬೈಲ್ ನಂಬರ್‌ಗೆ ಕರೆ ಮಾಡಿದ ಅಪರಿಚಿತನು, ಹಿಂದಿ ಭಾಷೆಯಲ್ಲಿ ಮಾತನಾಡುತ್ತಾ, ತಾನು ಪೇ ಟಿಎಂ ಅಧಿಕಾರಿ ಎಂದು ನಂಬಿಸಿ, ನಿಮ್ಮ ಪೇ ಟಿಎಂ ಖಾತೆಯು ಎಕ್ಸ್ ಪೈರಿ ಆಗಿದ್ದರಿಂದ ಕೆವೈಸಿ ಅಪ್‌ಡೇಟ್‌ ಮಾಡುವಂತೆ ತಿಳಿಸಿದ್ದು, ಅದರಂತೆ ಮಾಡಿದಾಗ ಅಪ್‌ಡೇಟ್ ಅಗಲಿಲ್ಲ. ಈ ಬಗ್ಗೆ  ಫೋನ್‌ನಲ್ಲಿ ಮಾತನಾಡುತ್ತಿದ್ದ ಅಪರಿಚಿತನಿಗೆ ತಿಳಿಸಿದಾಗ, ಫೋನ್‌ನಲ್ಲಿ ಆಪ್‌ಗಳ ಇನ್ ಸ್ಟಾಲ್ ಮಾಡಿಕೊಳ್ಳಲು ತಿಳಿಸಿದ್ದು, ಅಂತೆಯೇ ಇನ್ ಸ್ಟಾಲ್ ಮಾಡಿಕೊಂಡ ನಂತರ ಅಪರಿಚಿತನ‌ ಮಾತಿನಂತೆ ಬ್ಯಾಂಕ್ ಖಾತೆಯಿಂದ 10 ರೂ. ಪೇ ಟಿಎಂಗೆ ವರ್ಗಾಯಿಸಿದ್ದಾಗ ಹಣ ವರ್ಗಾವಣೆಯಾಗಿಲ್ಲ. ನಂತರ ಇದಾದ ಕೆಲ ಸಮಯದ ನಂತರ ಹೆಚ್‌ಡಿಎಫ್‌ಸಿ ಬ್ಯಾಂಕ್ ಖಾತೆಯಿಂದ 7 ಬಾರಿ 54,500 ರೂ. ಕಡಿತವಾದ ಬಗ್ಗೆ ಫೋನ್ ನಂಬರ್‌ಗೆ ಮೆಸೇಜ್‌ಗಳು ಬಂದಿತು. ಆಗ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಿರುವ ಬಗ್ಗೆ ವಿಚಾರಿಸಿದಾಗ, ಅಪರಿಚಿತನು ಆ ಹಣ ವಾಪಸ್ ಪೇ ಟಿಎಂಗೆ ಬರುವುದಾಗಿ ಹೇಳಿದನು. ನಂತರ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಖಾತೆಗಳಿಂದ ಒಟಿಪಿ ನಂಬರ್ ಬಳಸಿಕೊಂಡು ಹಣ ತೆಗೆದುಕೊಳ್ಳುತ್ತಿರುವ ಬಗ್ಗೆ ಮೊಬೈಲ್‌ಗೆ ಮೆಸೇಜ್‌ಗಳು ಬಂದವು. ತಕ್ಷಣ ಬ್ಯಾಂಕ್ ಕಸ್ಟಮರ್‌ ಕೇರ್  ಸಂಪರ್ಕಿಸಿ, ಹೆಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಖಾತೆಗಳನ್ನು ಬ್ಲಾಕ್ ಮಾಡಿಸಲಾಯಿತು. ಅಷ್ಟರಲ್ಲಿ ಕ್ರೆಡಿಟ್ ಕಾರ್ಡ್‌ನಿಂದ  9 ಬಾರಿ ಸೇರಿ ಒಟ್ಟು 82, 797 ರೂ. ದೋಚಿದ್ದಾನೆ. ಒಟ್ಟು 1 ಲಕ್ಷದ 37 ಸಾವಿರದ 297 ರೂ. ವಂಚಿಸಿರುವುದಾಗಿ ಧೀರೇಂದ್ರ ಪ್ರತಾಪ್ ಸಿಂಗ್ ದೂರಿದ್ದಾರೆ.

error: Content is protected !!