ಒಂಟಿ ಮಹಿಳೆಯ ಮೇಲೆ ಹಲ್ಲೆ : ದರೋಡೆ

ಒಂದು ಗಂಟೆಯಲ್ಲೇ ಏಳು ಮಂದಿ ಸೆರೆ ಹಿಡಿದ ಪೊಲೀಸರು

ದಾವಣಗೆರೆ, ನ.23- ದೇವಸ್ಥಾನದಿಂದ ಮನೆಗೆ ಸಾಗುತ್ತಿದ್ದ ಒಂಟಿ ಮಹಿಳೆಯ ಮೇಲೆ ಹಾಡಹಗಲೇ ಹಲ್ಲೆ ನಡೆಸಿ, ಡಕಾಯಿತಿ ಮಾಡಿದ್ದ ಏಳು ಮಂದಿ ದರೋಡೆಕೋರರನ್ನು ಬಂಧಿಸುವಲ್ಲಿ ಚನ್ನಗಿರಿ ಮತ್ತು ಸಂತೇಬೆನ್ನೂರು ಪೊಲೀಸರು ಯಶಸ್ವಿಯಾಗಿದ್ದು, ಘಟನೆ ನಡೆದ ಒಂದು ಗಂಟೆಯಲ್ಲೇ ಪ್ರಕರಣವನ್ನು ಬೇಧಿಸಿದ್ದಾರೆ.

ನಲ್ಕುದುರೆ ಗ್ರಾಮದಲ್ಲಿ ನಿನ್ನೆ ಬೆಳಿಗ್ಗೆ 7.30 ರಿಂದ 8 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ತೆರಳಿದ್ದ ಮಹಿಳೆ ಅಲ್ಲಿಂದ ವಾಪಸ್ ಮನೆಯತ್ತ ನಡೆದುಕೊಂಡು ಬರುತ್ತಿದ್ದರು. 

ಈ ಸಮಯದಲ್ಲಿ ಆ ಜಾಗದಲ್ಲಿ ಜನರು ಯಾರೂ ಇಲ್ಲದಿರುವುದನ್ನೇ ಬಂಡವಾಳವಾಗಿಸಿ ಕೊಂಡ ಏಳು ಮಂದಿ ದರೋಡೆಕೋರರು ಏಕಾಏಕಿ ಬಂದು ಮಹಿಳೆಗೆ ಚಾಕುವನ್ನು ತೋರಿಸಿ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಆಕೆಯ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು ಎಂದು ಆರೋಪಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿ ನೀಡಿದ ಮಾಹಿತಿಯನ್ನಾಧರಿಸಿ ಪೊಲೀಸರು ದರೋಡೆಕೋರರ ಬೆನ್ನಟ್ಟಿ ಸುಳಿವು ಪತ್ತೆ ಮಾಡಿ, ಘಟನೆ ನಡೆದ ಒಂದು ಗಂಟೆಯಲ್ಲೇ ಆರೋಪಿಗಳನ್ನು ಲಿಂಗದಹಳ್ಳಿ ಗ್ರಾಮದಲ್ಲಿ ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 15 ಗ್ರಾಂ ತೂಕದ ಬಂಗಾರದ ಸರ ಮತ್ತು ಕೃತ್ಯಕ್ಕೆ ಬಳಸಿದ ಕ್ರೂಸರ್ ವಾಹನ, ಮೂರು ಲಾಂಗ್, ಒಂದು ನಕಲಿ ಪಿಸ್ತೂಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಚನ್ನಗಿರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಸಂತೋಷ್‌ ಅವರ ಮಾರ್ಗದರ್ಶನದಂತೆ ಚನ್ನಗಿರಿ ಠಾಣೆಯ ಪಿಐ ಮಧು, ಸಂತೇಬೆನ್ನೂರು ಪಿಎಸ್ಐ ಶಿವರುದ್ರಪ್ಪ ಎಸ್.ಮೇಟಿ ಹಾಗೂ ಸಂತೇಬೆನ್ನೂರು ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಓಂಕಾರಪ್ಪ, ಮೈಲಾರಪ್ಪ, ಹಮೀದ್, ಯೋಗೇಶ್, ರುದ್ರಪ್ಪ, ಅಶೋಕ ರೆಡ್ಡಿ, ದೊಡ್ಡೇಶ್, ಕೊಟ್ರೇಶ್, ಮಂಜುನಾಥ್‌, ಪ್ರಹ್ಲಾದ್, ಸಂತೋಷ್, ವೃತ್ತ ಕಛೇರಿಯ ಪರಶುರಾಮ, ಸೋಮಶೇಖರ್‌, ರೇವಣಸಿದ್ದಪ್ಪ, ರಘು ಮತ್ತು ಚನ್ನಗಿರಿ ಪೊಲೀಸ್ ಠಾಣೆಯ ಪರಮೇಶ್ವರ ನಾಯ್ಕ, ಸಂತೋಷ, ನಾಗರಾಜ ಒಳಗೊಂಡ ತಂಡ ಪ್ರಕರಣ ಬೇಧಿಸಿದ್ದು, ಈ ಪತ್ತೆ ಕಾರ್ಯಕ್ಕೆ ಎಸ್ಪಿ ಸಿ.ಬಿ. ರಿಷ್ಯಂತ್ ಶ್ಲಾಘಿಸಿದ್ದಾರೆ.

error: Content is protected !!