ದಾವಣಗೆರೆ, ಮಾ.28- ಅಕ್ರಮವಾಗಿ ಸ್ಪೋಟಕ ವಸ್ತುಗಳ ಸಾಗಾಣಿಕೆ ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಂತರ ರಾಜ್ಯಗಳ ಆರೋಪಿಗಳನ್ನು ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ನರಸಿಂಹ ವಿ.ತಾಮ್ರಧ್ವಜ ನೇತೃತ್ವದ ತಂಡ ಬಂಧಿಸಿದೆ.
ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆ ಸಂತನಪುರಂನ ಹೊಸ ಪೋಸ್ಟಲ್ ಕಾಲನಿಯ, ಮೂಲತಃ ತೆಲಂಗಾಣ ರಾಜ್ಯದ ಮಹಬೂಬ್ ನಗರ ಜಿಲ್ಲೆ ಮೆಡಿಕೊಂಡ ಗ್ರಾಮದ ಬ್ಲಾಸ್ಟರ್ ಕೆಲಸಗಾರ ರಾಮರೆಡ್ಡಿ ಅಲಿಯಾಸ್ ಚೈತನ್ಯ ಅಲಿಯಾಸ್ ರಾಮಗೋಪಾಲ ರೆಡ್ಡಿ (44), ಆಂಧ್ರದ ಕರ್ನೂಲ್ ನಗರದ ವೆಂಕಟರಮಣ ಕಾಲೋನಿಯ ವಿಜಯ ಜನರಲ್ ಸ್ಟೋರ್ನ ಮಾಲೀಕ ಅನುಮುಲ್ ಶಿವಕುಮಾರ (36) ಬಂಧಿತರು.
ಬಂಧಿತರಿಂದ ಅಕ್ರಮವಾಗಿ ಸ್ಪೋಟಕ ಸಾಮಗ್ರಿಗಳನ್ನು ಪರವಾನಿಗೆ ಇಲ್ಲದೇ ಇರುವಂತಹ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ರಾಮರೆಡ್ಡಿ ಹಾಗೂ ಅನುಮುಲ್ ಶಿವಕುಮಾರನನ್ನು ಮಾ.25ರಂದು ಆಂಧ್ರದ ಹೈದರಾಬಾದ್ ಮತ್ತು ಕರ್ನೂಲ್ ನಗರದಿಂದ ಬಂಧಿಸಿ, ದಾವಣಗೆರೆಗೆ ಕರೆ ತರಲಾಯಿತು. ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಎಸ್ಐಗಳಾದ ಲಿಂಗನಗೌಡ ನೆಗಳೂರು, ಪುಷ್ಪಲತಾ, ಸಿಬ್ಬಂದಿಯಾದ ದೇವೇಂದ್ರ ನಾಯ್ಕ, ಮಂಜನಗೌಡ, ಮಹೇಶರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿತ್ತು.