ದಾವಣಗೆರೆ, ಮಾ.26- ಹಾಡುಹಗಲೇ ಮನೆ ಬಾಗಿಲು ಮುರಿದು ಕಳ್ಳತನ ಮಾಡಿರುವ ಘಟನೆ ಇಲ್ಲಿನ ಹಳೇ ಕುಂದುವಾಡದಲ್ಲಿ ನಡೆದಿದೆ.
ಹಳೇ ಕುಂದವಾಡದ ಶಿವಣ್ಣ ಎಂಬುವರು ಕುಟುಂಬ ಸಮೇತ ಗುರುವಾರ ಮಧ್ಯಾಹ್ನ ಲೋಕಿಕೆರೆ ಗ್ರಾಮಕ್ಕೆ ಹಬ್ಬಕ್ಕೆಂದು ಹೋಗಿದ್ದರು. ಈ ವೇಳೆ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು ಬಾಗಿಲು ಮುರಿದು ಮನೆಯೊಳಗೆ ಪ್ರವೇಶಿಸಿ, ಗಾಡ್ರೇಜ್ ಮುರಿದು 1 ಲಕ್ಷ ರೂ. ಮೌಲ್ಯದ 20 ಗ್ರಾಂ ಚಿನ್ನಾಭರಣ ಮತ್ತು 10 ಸಾವಿರ ನಗದನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಶಿವಣ್ಣ ಜಾತ್ರೆ ಮುಗಿಸಿಕೊಂಡು ಮನೆಗೆ ಬಂದಾಗ ಕಳ್ಳತನದ ಕೃತ್ಯ ಬೆಳಕಿಗೆ ಬಂದಿದೆ. ಘಟನಾ ಸ್ಥಳದಲ್ಲಿ ಶ್ವಾನ ದಳ ಪರಿಶೀಲನೆ ನಡೆಸಿದೆ. ಈ ಸಂಬಂಧ ವಿದ್ಯಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.