ದಾವಣಗೆರೆ, ಮಾ.22- ಗೋ ದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 2 ಲಕ್ಷದ 76 ಸಾವಿರ ಮೌಲ್ಯದ ಸ್ಪೋಟಕ ವಸ್ತುಗಳನ್ನು ಇಲ್ಲಿನ ಗ್ರಾಮಾಂತರ ಪೊಲೀಸರು ಜಪ್ತಿ ಮಾಡಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ದಾಖಲಾದ ಪ್ರಕರಣದಲ್ಲಿ ಕಾಡಜ್ಜಿ ಷಣ್ಮುಖಪ್ಪ ಅವರಿಗೆ ಸೇರಿದ ದುರ್ಗಾ ದೇವಿ ಎಕ್ಸ್ಪ್ಲೋಸಿವ್ ಮ್ಯಾಗ್ಜಿನ್ನ ಬಳಿಯ ಗೋದಾಮಿನ ಒಳಗಡೆ ಮತ್ತು ಮುಂಭಾಗದಲ್ಲಿ ಸ್ಪೋಟಕ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿತ್ತು. ಭಾನು ವಾರವೂ ಸಹ ದಾಳಿ ನಡೆಸಿ ಸ್ಪೋಟಕಗಳ ಜಪ್ತಿ ಮಾಡಿ ಮೂವರ ಬಂಧಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಇನ್ನುಳಿದ ಆರೋಪಿತರ ಪತ್ತೆಗೆ ಹಾಗೂ ಹೆಚ್ಚಿನ ಸ್ಫೋಟಕ ವಸ್ತುಗಳು ಕಂಡುಬಂದಲ್ಲಿ ಅವುಗಳನ್ನು ಜಪ್ತಿ ಮಾಡಲು ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ ನೇತೃತ್ವದಲ್ಲಿ ಅಪರಾಧ ಪೊಲೀಸ್ ಸಿಬ್ಬಂದಿ ತಂಡ ರಚಿಸಿ ರಾಯಚೂರು ಜಿಲ್ಲೆ ಮಾನ್ವಿಗೆ ಕಳುಹಿಸಿಕೊಡಲಾಗಿತ್ತು.
ಇಂದು ಮಾನ್ವಿಗೆ ತೆರಳಿ ಸ್ಥಳೀಯ ಪೊಲೀಸರ ಸಹಾಯದೊಂದಿಗೆ ಮಾನ್ವಿಯ ಇಸ್ಲಾಂ ನಗರದ ಆರೋಪಿ ಶೇಕ್ ಮುಜಾಹಿದ್ ಸಿದ್ದಿಖಿಯನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ಮಾಡಿದಾಗ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಆರೋಪಿ ಬಿ.ಎಸ್. ವಿಕ್ರಮ್ ಗೆ ಸ್ಫೋಟಕ ವಸ್ತುಗಳನ್ನು ತಾನೇ ನೀಡಿರುವುದಾಗಿ ಬಂಧಿತ ಆರೋಪಿ ಶೇಕ್ ಮುಜಾಹಿದ್ ಒಪ್ಪಿಕೊಂಡಿದ್ದಾನೆ. ಸ್ಫೊಟಕ ವಸ್ತುಗಳನ್ನಿಟ್ಟ ಸ್ಥಳವಾದ ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯ ಆರ್.ಜಿ. ಕ್ಯಾಂಪ್ ನಲ್ಲಿನ ಸ್ಥಳಕ್ಕೆ ದಾವಣಗೆರೆಯ ಗ್ರಾಮಾಂತರ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ, ಮಹಿಳಾ ಪಿಎಸ್ಐ ಎಸ್. ಪುಷ್ಪಲತಾ, ವೀರಭದ್ರಪ್ಪ, ದೇವೆಂದ್ರ ನಾಯ್ಕ, ನಾಗರಾಜಯ್ಯ, ವೆಂಕಟೇಶ ರೆಡ್ಡಿ ಮಂಜನಗೌಡ, ಅರುಣ್ಕುಮಾರ್ ಕುರುಬರ ಒಳಗೊಂಡ ತಂಡ, ಮಾನ್ವಿ ಠಾಣೆಯ ಪೊಲೀಸ್ ನಿರೀಕ್ಷಕರು, ಆಂಟಿ ಸಬೋಟೇಜ್ ಚೆಕ್ ಟೀಮ್ ಮತ್ತು ಸಿಬ್ಬಂದಿ ಒಳಗೊಂಡ ತಂಡದೊಂದಿಗೆ ದಾಳಿ ನಡೆಸಿದೆ.