ದಾವಣಗೆರೆ, ಮಾ.18- ಮಗಳ ಅನೈತಿಕ ಸಂಬಂಧ ಮುಚ್ಚಿ ಹಾಕುವ ಸಲುವಾಗಿ, ಈ ವಿಚಾರ ತಿಳಿದಿದ್ದ ತನ್ನ ತಂದೆಯನ್ನೇ ಹತ್ಯೆಗೈದಿದ್ದ ಮಗಳು ಸೇರಿ, ಮೂವರು ಆರೋಪಿಗಳನ್ನು ಹೊನ್ನಾಳಿ ಪೊಲೀಸರು ಬಂಧಿಸಿದ್ದಾರೆ.
ಹೊನ್ನಾಳಿ ತಾಲ್ಲೂಕು ಕುಳಗಟ್ಟೆ ಗ್ರಾಮದವರಾದ ವೈ.ಟಿ. ಶ್ರೀನಿವಾಸ (34), 3ನೇ ವರ್ಷದ ಬಿಎಸ್‍ಸಿ ನರ್ಸಿಂಗ್ ವಿದ್ಯಾರ್ಥಿನಿ ಕೆ.ಎಸ್. ಸಿಂಧು (21), ಸಿ. ಉಷಾ ಬಂಧಿತರು. ಮೃತ ಮಂಜಪ್ಪನಿಗೆ ಉಷಾ ಮಗಳಾಗಿದ್ದು, ಸಿಂಧು ಮೊಮ್ಮಗಳು.
ಇದೇ ಮಾ.3ರಂದು ಅಡಿಕೆ ತೋಟಕ್ಕೆ ನೀರು ಕಟ್ಟಲು ಹೋಗಿದ್ದ ಮೃತ ಮಂಜಪ್ಪ (70) ನಾಪತ್ತೆಯಾಗಿದ್ದ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹೊನ್ನಾಳಿ ತಾಲ್ಲೂಕು ಕಮ್ಮಾರಗಟ್ಟೆ ಗ್ರಾಮದ ಹತ್ತಿರ ಭದ್ರಾ ಚಾನಲ್ ನಲ್ಲಿ ಮಂಜಪ್ಪನ ಶವ ದೊರೆತಿತ್ತು. ಅಡಿಕೆ ತೋಟಕ್ಕೆ ನೀರು ಕಟ್ಟಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಭದ್ರಾ ಚಾನಲ್ ನಲ್ಲಿ ಬಿದ್ದು ಮೃತಪಟ್ಟಿರುವುದಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮರಣೋತ್ತರ ಶವ ಪರೀಕ್ಷೆ ಮಾಡು ವಾಗ ಮೃತ ದೇಹದ ತಲೆಗೆ ಆಗಿರುವ ಗಾಯ ಹಾಗೂ ಪಕ್ಕೆಲಬುಗಳು ಮುರಿದಿರುವುದನ್ನು ನೋಡಿದರೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ರುವ ಬಗ್ಗೆ ವೈದ್ಯರು ಸಂಶಯ ವ್ಯಕ್ತಪಡಿಸಿದ್ದರು. ಹಾಗಾಗಿ ಪ್ರಕರಣದ ಜಾಡು ಹಿಡಿದು ಹೊರಟ ಪೊಲಿಸರು, ಮೃತನ ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಗೌಪ್ಯವಾಗಿ ಮಾಹಿತಿ ಕಲೆ ಹಾಕಿದಾಗ, ಅಪರಾಧಿಗಳು ಒಳಸಂಚು ರೂಪಿಸಿ, ಮಂಜಪ್ಪನನ್ನು ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ದೇಹವನ್ನು ಭದ್ರಾ ಚಾನಲ್‍ಗೆ ಎಸೆದಿರುವ ಮಾಹಿತಿ ಲಭಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ಸೆರೆಗೆ ಬಲೆ ಬೀಸಿದ್ದರು.
ಇಂದು ಎಸ್ಪಿ ಹನುಮಂತರಾಯ ಮಾರ್ಗದರ್ಶನದಲ್ಲಿ ಚನ್ನಗಿರಿ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಎಸ್. ಬಸವರಾಜ ನೇತೃತ್ವದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಟಿ.ವಿ. ದೇವರಾಜ್, ಪೊಲೀಸ್ ಉಪ-ನಿರೀಕ್ಷಕ ಬಸವರಾಜ ಬಿರಾದಾರ ಮತ್ತು ಸಿಬ್ಬಂದಿಗಳಾದ ಟಿ. ಪರಶುರಾಮ, ವೆಂಕಟರಮಣ, ಫೈರೋಜ್‍ಖಾನ್, ಬಸವರಾಜ್ ಜಂಬೂರು, ಜಗದೀಶ, ಶೀಲಾ ಒಳಗೊಂಡ ತಂಡ ಕೊಲೆ ಪ್ರಕರಣ ಬೇಧಿಸಿ ಆರೋಪಿಗಳನ್ನು ಬಂಧಿಸಿದೆ.
ಹಿನ್ನೆಲೆ: ವೈ.ಟಿ. ಶ್ರೀನಿವಾಸ ಮತ್ತು ವಿದ್ಯಾರ್ಥಿನಿ ಸಿಂಧು ಮಧ್ಯೆ ಅನೈತಿಕ ಸಂಬಂಧವಿತ್ತು. ಈ ವಿಚಾರ ಮೃತ ಮಂಜಪ್ಪನಿಗೆ ಗೊತ್ತಿತ್ತು. ಕಾರಣ ಶ್ರೀನಿವಾಸನು ಮಂಜಪ್ಪನಿಗೆ ಮದ್ಯಪಾನ ಮಾಡಿಸಿ, ದೊಣ್ಣೆಯಿಂದ ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಕೊಲೆಗೈದು ಮೃತ ದೇಹವನ್ನು ಚಾನೆಲ್‍ನಲ್ಲಿ ಎಸೆದಿದ್ದ. ಈ ಕೃತ್ಯಕ್ಕೆ ಸಿಂಧು ಮತ್ತು ಉಷಾ ಕುಮ್ಮಕ್ಕು ನೀಡಿದ್ದರು. ಈ ಬಗ್ಗೆ ಬಂಧಿತ ಆರೋಪಿಗಳೇ ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟಿದ್ದಾರೆ.