ಕೊಟ್ಟೂರು, ಮೇ 18- ವರದಕ್ಷಿಣೆ ಕಿರುಕುಳ ನೀಡಿ ಮಹಿಳೆಯನ್ನು ಕೊಲೆ ಮಾಡಿರುವುದಾಗಿ ಮೃತ ಮಹಿಳೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ದಾವಣಗೆರೆಯ ಯಲ್ಲಮ್ಮ ನಗರದ ಪೂಜಾಳನ್ನು ಆರು ವರ್ಷದ ಹಿಂದೆ ಕೊಟ್ಟೂರಿನ ಶಿವರಾಜ್ ಎಂಬಾತನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಇವರಿಗೆ ಐದು ವರ್ಷದ ಹೆಣ್ಣು ಮಗು ಹಾಗೂ ಮೂರು ವರ್ಷದ ಗಂಡು ಮಗು ಇದ್ದು, ಶಿವರಾಜ್ ಹೆಂಡತಿ ಪೂಜಾಳಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಗಂಡ ಶಿವರಾಜ್, ಮಾವ ಚಿತ್ರಗಾರ ರಾಮಣ್ಣ, ಅತ್ತೆ ರಾಜೇಶ್ವರಿ ಮೂವರು ಸೇರಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಸ್ಥಳಕ್ಕೆ ತಹಶೀಲ್ದಾರ್ ಜಿ. ಅನಿಲ್ಕುಮಾರ್, ಡಿವೈಎಸ್ಪಿ ಹಾಲಮೂರ್ತಿ ರಾವ್, ಸಿಪಿಐ ದೊಡ್ಡಪ್ಪ, ಪಿಎಸ್ಐ ನಾಗಪ್ಪ ಭೇಟಿ ನೀಡಿ ಪರಿಶೀಲಿಸಿದರು.