ಕೂಡ್ಲಿಗಿ, ಮಾ.11- ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋದದ್ದನ್ನು ಗಮನಿಸಿದ ಕಳ್ಳರು ಬೀಗ ಮುರಿದು ಒಳಗಿದ್ದ ಗಾಡ್ರೇಜ್ ಲಾಕರ್ ಮುರಿದು ಅದರಲ್ಲಿದ್ದ 2.60 ಲಕ್ಷ ರೂ ಬೆಲೆಬಾಳುವ ಬಂಗಾರದೊಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಬುಧವಾರ ಮಧ್ಯಾಹ್ನ ಪಟ್ಟಣದ ಬಾಪೂಜಿ ನಗರದ 2ನೇ ವಾರ್ಡಿನಲ್ಲಿ ಹಾಡಹಗಲೇ ಜರುಗಿದೆ.
ವಿಮಲಾಕ್ಷಿ, ನಾಗರಾಜ ಎಂಬುವವರು ಕೂಡ್ಲಿಗಿಯ ಆಂಬ್ಯುಲೆನ್ಸ್ನಲ್ಲಿ ಎಎನ್ಎಂ ಆಗಿದ್ದು, ಕೆಲಸಕ್ಕೆಂದು ಬುಧವಾರ ಬೆಳಿಗ್ಗೆ 10.20 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನೀಷಿಯನ್ ಆಗಿ ಸೇವೆ ಸಲ್ಲಿಸುತ್ತಿರುವ ಅವರ ತಂಗಿ ವೇದಾವತಿ ಮಧ್ಯಾಹ್ನ 1 ಗಂಟೆಗೆ ಊಟಕ್ಕೆಂದು ಮನೆಗೆ ಬಂದು ನೋಡಲಾಗಿ, ಮನೆ ಬಾಗಿಲಿಗೆ ಹಾಕಿದ್ದ ಬೀಗ ಇರಲಿಲ್ಲ. ಒಳಗೆ ಗಾಡ್ರೇಜ್ ಬಾಗಿಲು ತೆರೆದಿದ್ದು ಅದರಲ್ಲಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಬ್ಯಾಗೊಂದರಲ್ಲಿ ಇಟ್ಟಿದ್ದ ಬಂಗಾರದೊಡವೆಗಳು ಇರಲಿಲ್ಲ ಎಂದಿದ್ದಾರೆ.
ತಕ್ಷಣ ಅಕ್ಕನಿಗೆ ಮಾಹಿತಿ ತಿಳಿಸಿ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಕೂಡ್ಲಿಗಿ ಎಎಸ್ ಐ ರುದ್ರಮುನಿ ಮತ್ತು ಸಿಬ್ಬಂದಿ ಕಳುವಾಗಿರುವ ಬಂಗಾರದ ಆಭರಣಗಳ ಮಾಹಿತಿ ಪಡೆದುಕೊಂಡು, ಪೊಲೀಸ್ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ಹೆಚ್ಚಿನ ತನಿಖಾ ಮಾಹಿತಿ ಕಲೆಹಾಕಿದ್ದಾರೆ.
ವಿಮಲಾಕ್ಷಿ ನಾಗರಾಜ್ ನೀಡಿದ ದೂರಿನಂತೆ 2.60 ಲಕ್ಷ ರೂ ಬೆಲೆಬಾಳುವ ಬಂಗಾರದ ಆಭರಣಗಳಾದ 35 ಗ್ರಾಂ ಮಾಂಗಲ್ಯ ಚೈನ್, 15 ಗ್ರಾಂ ನೆಕ್ಲೇಸ್, 12 ಗ್ರಾಂ 3 ಜೊತೆ ಕಿವಿಯೋಲೆ ಹಾಗೂ 3 ಗ್ರಾಂ ನ ಬಂಗಾರದ 3 ಗುಂಡುಗಳು, ಒಂದು ತಾಳಿಬೊಟ್ಟು, ಕಿವಿಗೆ ಹಾಕುವ ಒಂದು ಸೈಡ್ ಚೈನ್ ಕಳುವಾಗಿದೆ ಎಂದು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.