ದಾವಣಗೆರೆ, ಮಾ.9- ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ 2 ಲಕ್ಷದ 25 ಸಾವಿರ ಮೌಲ್ಯದ ಪಡಿತರ ಅಕ್ಕಿಯನ್ನು ಇಂದು ಹರಿಹರ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಎಸ್ಪಿ ಹನುಮಂತರಾಯ, ಎಎಸ್ಪಿ ಎಂ. ರಾಜೀವ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಪೊಲೀಸ್ ಉಪಾಧೀಕ್ಷಕ ನರಸಿಂಹ ವಿ. ತಾಮ್ರಧ್ವಜ ನೇತೃತ್ವದಲ್ಲಿ ಹರಿಹರ ವೃತ್ತ ನಿರೀಕ್ಷಕ ಯು. ಸತೀಶ್ ಕುಮಾರ, ಹರಿಹರ ತಾಲ್ಲೂಕು ಕಛೇರಿ ಆಹಾರ ಶಿರಸ್ತೇದಾರ್ ಯು.ಆರ್. ರಮೇಶ್, ಹರಿಹರ ಗ್ರಾಮಾಂತರ ಪಿಎಸ್ಐ ಮಹಮದ್ ಸೈಪುದ್ದೀನ್ ಮತ್ತು ಸಿಬ್ಬಂದಿಗಳಾದ ಮಹಮದ್ ರಸೂಲ್, ಲಿಂಗರಾಜ್, ಹನುಮಂತಪ್ಪ, ಕರಿಯಪ್ಪ, ಕೃಷ್ಣ, ವೆಂಕಟೇಶ್, ಶ್ರೀಧರ್ ಬಣಕಾರ್, ಹರೀಶ್ ಒಳಗೊಂಡ ತಂಡವು ರಾಣೆಬೆನ್ನೂರಿನಿಂದ ತುಮಕೂರಿಗೆ ಹರಿಹರ ಬೈಪಾಸ್ ಬಳಿ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-48ರ ಮಾರ್ಗವಾಗಿ ಲಾರಿಯಲ್ಲಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ವೇಳೆ ದಾಳಿ ನಡೆಸಿ, ತಲಾ 50 ಕೆಜಿವುಳ್ಳ 300 ಪ್ಲಾಸ್ಟಿಕ್ ಚೀಲಗಳ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದೆ.