ದಾವಣಗೆರೆ, ಮಾ.3- ಗಾಂಜಾ ಮತ್ತಿನಲ್ಲಿ ಸಾರ್ವಜನಿಕರಿಗೆ ಚಾಕುಗಳನ್ನು ತೋರಿಸಿ ಹಣ ಮತ್ತು ಚಿನ್ನಾಭರಣ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಇಬ್ಬರು ದರೋಡೆಕೋರರನ್ನು ಹೊನ್ನಾಳಿ ಪೋಲಿಸರು ಬಂಧಿಸಿದ್ದಾರೆ.
ಶಿವಮೊಗ್ಗ ಗಾಡಿಕೊಪ್ಪ ತಾಂಡಾದ ಕಿರಣ್, ಶಿಕಾರಿಪುರ ತಾಲ್ಲೂಕು ತರ್ಲಘಟ್ಟ ಗ್ರಾಮದ ಶ್ರೀನಾಥ ನಾಯ್ಕ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಹೊನ್ನಾಳಿ ವೃತ್ತ ನಿರೀಕ್ಷಕ ಟಿ.ವಿ. ದೇವರಾಜ ಸಿಬ್ಬಂದಿಯೊಂದಿಗೆ ಹೊಸಜೋಗ ಗ್ರಾಮದ ಬಸ್ ನಿಲ್ದಾಣದ ಹತ್ತಿರ, ಸವಳಂಗ-ಶಿಕಾರಿಪುರ ರಸ್ತೆಯ ಕ್ರಾಸ್‍ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ವಾಹನದಲ್ಲಿ ಬಂದ ಐದು ಜನರಲ್ಲಿ ಮೂರು ಜನರು ಪೊಲೀಸರನ್ನು ನೋಡಿ ಓಡಿ ಹೋಗಿದ್ದು, ಇನ್ನಳಿದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ನಂತರ ಇವರನ್ನು ವಿಚಾರಣೆಗೆ ಒಳಪಡಿಸಿದಾಗ, ಮತ್ತಿನಲ್ಲಿ ಜನರಿಗೆ ಚಾಕು ತೋರಿಸಿ, ಹೆದರಿಸಿ ಅವರಿಂದ ಹಣ ಮತ್ತು ಬಂಗಾರವನ್ನು ಕಿತ್ತುಕೊಂಡು ಹೋಗುವ ಸಲುವಾಗಿ ಬಂದಿರುವುದಾಗಿ ತಿಳಿಸಿದ್ದಾರೆ.
ನಂತರ ಸ್ಥಳಕ್ಕೆ ನ್ಯಾಮತಿ ತಹಶೀಲ್ದಾರರನ್ನು ಕರೆಸಿಕೊಂಡು ಆರೋಪಿತರು ಕೃತ್ಯಕ್ಕೆ ಉಪಯೋಗಿಸಿದ್ದ ವಾಹನ, ಎರಡು ಚಾಕುಗಳು ಮತ್ತು 12 ಗ್ರಾಂ ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡಿದ್ದಾರೆ. ಓಡಿ ಹೋದವರಲ್ಲಿ ಓರ್ವ ಶಿವಮೊಗ್ಗ ನಾರಾಯಣಪುರ ಗ್ರಾಮದ ಲೋಹಿತ್‌ನಾಯ್ಕ ಶಿವಮೊಗ್ಗ ನಗರದಲ್ಲಿ ನಡೆದ ಒಂದು ಕೊಲೆ ಪ್ರಕರಣ, ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆಗೆ ಪ್ರಯತ್ನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.