ರಸ್ತೆ ತೆರಿಗೆ ಕಟ್ಟದ ಲಾರಿ ಮಾಲೀಕರಿಬ್ಬರಿಗೆ ಜೈಲು ಶಿಕ್ಷೆ

ದಾವಣಗೆರೆ, ಫೆ.25- ರಸ್ತೆ ತೆರಿಗೆ ಕಟ್ಟದ ಲಾರಿ ಮಾಲೀಕರಿಬ್ಬರನ್ನು ಇಲ್ಲಿನ ಜೆಎಂಎಫ್ ಸಿ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.

ನಗರದ ಬೀಡಿ ಬಡಾವಣೆಯ ಮಹಮ್ಮದ್ ಸಮೀವುಲ್ಲಾ ಹಾಗೂ ಟಿಪ್ಪು ನಗರದ ಮುಬಾರಕ್ ಜೈಲು ಶಿಕ್ಷೆಗೊಳಗಾದವರು. ಇವರಿಬ್ಬರೂ 2014ರಿಂದ ರಸ್ತೆ ತೆರಿಗೆ ಕಟ್ಟದೇ 1 ಲಕ್ಷಕ್ಕಿಂತಲ್ಲೂ ಹೆಚ್ಚು ಬಾಕಿ ಉಳಿಸಿಕೊಂಡಿದ್ದರು. ಹಲವು ಬಾರಿ ಸಮನ್ಸ್ ಕಳುಹಿಸಿದ್ದರೂ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ನಂತರ ಆರ್ ಟಿಓ ಅಧಿಕಾರಿಗಳು ನಗರ ಪಾಲಿಕೆ ಸಹಾಯದಿಂದ ವಿಳಾಸವನ್ನು ಪತ್ತೆ ಮಾಡಿ ಆಜಾದ್ ನಗರ ಪೊಲೀಸರ ಸಹಕಾರದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಸಾರಿಗೆ ಇಲಾಖೆಯಲ್ಲಿ 2014-15ನೇ ಸಾಲಿನಲ್ಲಿ ತೆರಿಗೆ ಕಟ್ಟದ ಹಳದಿ ಬಣ್ಣದ ಲಾರಿ, ಮ್ಯಾಕ್ಸಿಕ್ಯಾಬ್ ಸೇರಿ 72 ವಾಹನಗಳ ಮಾಲೀಕರ ವಿರುದ್ಧ ಅಂದಿನ ಪ್ರಾದೇಶಿಕ ಸಾರಿಗೆ ಅಧಿಕಾರಿ ಹನುಮಂತಪ್ಪ ತೆಂಬದ್ ಪ್ರಕರಣ ದಾಖಲಿಸಿದ್ದರು. 

ವಿಳಾಸ ಬದಲಾಯಿಸಿ ವಾಹನಗಳನ್ನು ಬೇರೆಯವರಿಗೆ ಮಾರಾಟ ಮಾಡಿ, ಇಲ್ಲದೇ ವಾಹನಗಳನ್ನು ಬಚ್ಚಿಟ್ಟು ತೆರಿಗೆ ವಂಚಿಸಲಾಗಿತ್ತು. ಜಿಲ್ಲೆ ಯಲ್ಲಿ 72 ಲಾರಿ ಮಾಲೀಕರು 35 ಲಕ್ಷಕ್ಕಿಂತಲ್ಲೂ ಹೆಚ್ಚು ತೆರಿಗೆ ಬಾಕಿ ಉಳಿ ಸಿಕೊಂಡಿದ್ದು, ಕಂಪನಿಯೊಂದು 20 ಲಕ್ಷಕ್ಕೂ ಹೆಚ್ಚು ಬಾಕಿ ಉಳಿಸಿ ಕೊಂಡಿದೆ. 8 ಮಾಲೀಕರ ವಿರುದ್ಧ ಈಗಾಗಲೇ ಬಂಧನದ ವಾರೆಂಟ್ ಕಳುಹಿಸಿದ್ದು, ಅವರಲ್ಲಿ ಕೆಟಿಜೆ ನಗರ ಠಾಣಾ ವ್ಯಾಪ್ತಿಯ ಇಬ್ಬರು ಹಾಗೂ ಗ್ರಾಮಾಂತರ ಠಾಣಾ ವ್ಯಾಪ್ತಿಯ ಇಬ್ಬರು ಸೇರಿದ್ದಾರೆ. ಲಾರಿ ಮಾಲೀಕರಿಬ್ಬರ ಜಾಮೀನನ್ನು ನ್ಯಾಯಾಲಯ ನಿರಾಕರಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ. ಹಣ ಪಾವತಿ ನಂತರ ಬಿಡುಗಡೆಯಾಗಲಿದ್ದಾರೆ ಎಂದು ಆರ್ ಟಿಓ ಇನ್ಸ್ ಪೆಕ್ಟರ್ ಪ್ರಕಾಶ್ ಶಾನ್ ಭಾಗ್ ತಿಳಿಸಿದ್ದಾರೆ.

ರಸ್ತೆ ತೆರಿಗೆ ಕಟ್ಟದ 72 ಪ್ರಕರಣಗಳು ದಾಖಲಾಗಿದ್ದು, ಐವರು ಈಗಾಗಲೇ ತೆರಿಗೆ ಕಟ್ಟಿದ್ದಾರೆ. ತೆರಿಗೆ ಕಟ್ಟದವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು. ವಾಹನವನ್ನು ಜಪ್ತಿ ಮಾಡಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಮಲ್ನಾಡ್ ಮಾಹಿತಿ ನೀಡಿದ್ದಾರೆ.

error: Content is protected !!