2 ಲಕ್ಷದ 72 ಸಾವಿರ ನಗದು ವಶ
ದಾವಣಗೆರೆ, ಏ.23- ಅಸಲಿ ಬಂಗಾರ ಎಂದು ನಂಬಿಸಿ ನಕಲಿ ಬಂಗಾರ ನೀಡಿ ವಂಚಿಸಿದ್ದ ಆರೋಪಿಯನ್ನು ಬಂಧಿಸಿರುವ ನ್ಯಾಮತಿ ಪೊಲೀಸರು 2 ಲಕ್ಷದ 72 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ತಾಲ್ಲೂಕು ಹಾಡೋನಹಳ್ಳಿ ಗ್ರಾಮದ ಕೊರಚರ ಕಾಲೋನಿಯ ಬುಟ್ಟಿ ಹೆಣೆಯುವ ಕೆಲಸಗಾರ ಉಲ್ಲಾಸ ಬಂಧಿತನು. ಮತ್ತೋರ್ವ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಮಾರ್ಚ್ 26, 2021ರಂದು ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಗೋರಬಾಳ ಗ್ರಾಮದ ನೇಕಾರ ಪರಶುರಾಮ ಎಂಬುವರಿಗೆ ಆರೋಪಿಯು ಪದೇ ಪದೇ ಫೋನ್ ಮಾಡಿ ಮನೆಯ ಪಾಯ ತೆಗೆಯುವಾಗ ಬಂಗಾರದ ನಿಧಿ ಸಿಕ್ಕಿದ್ದು, ಅದರಲ್ಲಿ ಅರ್ಧ ಕೆ.ಜಿ. ಬಂಗಾರದ ಬಿಲ್ಲೆಗಳನ್ನು ಮಾರಾಟಕ್ಕೆ ಕೊಡುವುದಾಗಿ ನಂಬಿಸಿ, ಬೇಡವೆಂದರೂ ಬಿಡದೇ ಪೋನ್ ಮಾಡಿ ಹಣದ ತೊಂದರೆ ನೆಪ ಹೇಳಿ 5 ಲಕ್ಷ ರೂ.ಗೆ ಬಂಗಾರದ ಬಿಲ್ಲೆಗಳ ಮಾರಾಟ ಮಾಡುವುದಾಗಿ ತಿಳಿಸಿದ್ದ.
ಆರೋಪಿತನ ಮಾತಿನಂತೆ ಶಿವಮೊಗ್ಗಕ್ಕೆ ಬಂದು ಅಲ್ಲಿಂದ ನ್ಯಾಮತಿ ತಾಲ್ಲೂಕು ಚೀಲೂರು ಗ್ರಾಮಕ್ಕೆ ಬಂದಾಗ, ಪರಿಚಿತನಾಗಿ ತನ್ನ ಬಳಿಯಿದ್ದ ಒಂದು ಗಂಟು ತೋರಿಸಿ ನಮ್ಮ ಮನೆಯ ಪಾಯ ತೆಗೆಯುತ್ತಿದ್ದಾಗ ಸಿಕ್ಕ ನಿಧಿ ಎಂದು ಹೇಳಿ ಒಂದು ಬಿಲ್ಲೆಯನ್ನು ಕೊಟ್ಟು ಪರೀಕ್ಷಿಸಿಕೊಳ್ಳುವಂತೆಯೂ ನಾಟಕವಾಡಿದ್ದಾನೆ.
ಎಲ್ಲಾ ಬಂಗಾರದ ಬಿಲ್ಲೆಗಳನ್ನು ಕೇಳಿದರೂ ನೀಡದೇ ಒಂದು ಬಿಲ್ಲೆ ಕೊಟ್ಟು 1 ಸಾವಿರದ 500 ರೂ. ನಗದು ಪಡೆದಿದ್ದ. ಪರಶುರಾಮ ತನ್ನೂರಿಗೆ ಹೋಗಿ ಪರೀಕ್ಷಿಸಿದಾಗ ಆರೋಪಿತನು ನೀಡಿದ್ದ ಒಂದು ಬಿಲ್ಲೆ ಚಿನ್ನವೇ ಎಂದು ಖಾತ್ರಿಪಡಿಸಿಕೊಂಡರು. ನಂತರ ಆರೋಪಿತನು ಪುನಃ ಫೋನ್ ಮಾಡಿ ತಿಳಿಸಿದಂತೆ ಚೀಲೂರು ಗ್ರಾಮಕ್ಕೆ ಪರಶುರಾಮ ತೆರಳಿದಾಗ, ಅಲ್ಲಿದ್ದ ಆರೋಪಿ ಉಲ್ಲಾಸ ಮತ್ತು ಈತನೊಂದಿಗಿದ್ದ ಮತ್ತೋರ್ವ ಅರ್ಧ ಕೆ.ಜಿ. ತೂಕದಷ್ಟು ಬಿಲ್ಲೆಗಳಿರುವ ಒಂದು ಬಟ್ಟೆಯ ಗಂಟನ್ನು ನೀಡಿ 4 ಲಕ್ಷದ 80 ಸಾವಿರ ನಗದನ್ನು ಪಡೆದು, ಅಲ್ಲಿಂದ ಪರಾರಿಯಾಗಿದ್ದರು.
ನ್ಯಾಮತಿ ಠಾಣೆಯಲ್ಲಿ ವಂಚನೆಗೊಳಗಾದ ಪರಶುರಾಮ ದೂರು ದಾಖಲಿಸಿದ್ದರು. ಈ ಪ್ರಕರಣ ಸಂಬಂಧ ಎಸ್ಪಿ ಹನುಮಂತರಾಯ, ಎಎಸ್ಪಿ ಎಂ. ರಾಜೀವ್ ಹಾಗೂ ಚನ್ನಗಿರಿ ಪೊಲೀಸ್ ಉಪಾಧೀಕ್ಷಕ ಡಾ. ಸಂತೋಷ್ ಮಾರ್ಗದರ್ಶನದಲ್ಲಿ ಹೊನ್ನಾಳಿ ಸಿಪಿಐ ಟಿ.ವಿ. ದೇವರಾಜ ನೇತೃತ್ವದಲ್ಲಿ ರಚಿಸಲಾಗಿದ್ದ ವಿಶೇಷ ತಂಡವು ಇಂದು ಟಿ.ವಿ. ದೇವರಾಜ ನೇತೃತ್ವದಲ್ಲಿ ಪಿಎಸ್ಐ ರಮೇಶ್ ಹಾಗೂ ಸಿಬ್ಬಂದಿಗಳೊಂದಿಗೆ ಹೊಳಲೂರು ಗ್ರಾಮದಲ್ಲಿ ಆರೋಪಿತ ಉಲ್ಲಾಸನನ್ನು ಬಂಧಿಸಿ, ಈತನಿಂದ 2 ಲಕ್ಷದ 72 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.