ದಾವಣಗೆರೆ, ಏ.22- ಕೊರೊನಾ ನಿಯಮ ಉಲ್ಲಂಘಿಸಿ, ನಿರ್ಲಕ್ಷದಿಂದ ವ್ಯಾಪಾರ ನಡೆಸಿದ ಆರೋಪದಡಿ ಇಂದು ಇಬ್ಬರು ಹೋಟೆಲ್ ಮಾಲೀಕರನ್ನು ವಶಕ್ಕೆ ಪಡೆದು ಇವರಿಬ್ಬರ ವಿರುದ್ಧ ಪ್ರತ್ಯೇಕವಾಗಿ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮುಖ ಗವಸು ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವ್ಯಾಪಾರ ಮತ್ತು ಖರೀದಿಗೆ ಅವಕಾಶವಿದ್ದರೂ ನಗರದ ಮಾಗಾನಹಳ್ಳಿ ರಸ್ತೆಯ ಅಕ್ಸಾ ಮಸೀದಿಯ ಕಾಂಪ್ಲೆಕ್ಸ್ನಲ್ಲಿರುವ ಟೀ ಸ್ಟಾಲ್ ಹೋಟೆಲ್ ನಲ್ಲಿ ಮಾಲೀಕ ಮೊಹಮ್ಮದ್ ಗೌಸ್ ಎಂಬಾತ ಕೊರೊನಾ ನಿಯಮ ಉಲ್ಲಂಘನೆಯಾಗುವಂತೆ ಹೆಚ್ಚಿನ ಜನರನ್ನು ಸೇರಿಸಿಕೊಂಡು ಗುಂಪಾಗಿ ಕುಳಿತುಕೊಂಡು ಸೂಕ್ತ ಸಾಮಾಜಿಕ ಅಂತರ ಕಾಪಾಡದೇ ವ್ಯಾಪಾರ ಮಾಡುತ್ತಿದ್ದ. ಬೈಕ್ ನಲ್ಲಿ ರೌಂಡ್ಸ್ ಮಾಡುತ್ತಾ ಜನಜಾಗೃತಿ ಮೂಡಿಸುತ್ತಿದ್ದ ಠಾಣೆ ಪಿಎಸ್ ಐ ರವೀಂದ್ರ ಕಾಳಭೈರವ ಮತ್ತು ಸಿಬ್ಬಂದಿಗಳ ತಂಡ ದಾಳಿ ನಡೆಸಿದೆ.
ಉದ್ದೇಶಪೂರ್ವಕವಾಗಿ ರೋಗವು ಹರಡುವಂತೆ ಜನರನ್ನು ಗುಂಪು ಕಟ್ಟಿಕೊಂಡು ವ್ಯಾಪಾರ ಮಾಡುತ್ತಿದ್ದರಿಂದ ಸೂಕ್ತ ಮುಂಜಾಗ್ರತಾ ಕ್ರಮವನ್ನು ಅನುಸರಿಸಿ ಹೋಟೆಲ್ ಮಾಲೀಕನನ್ನು ವಶಕ್ಕೆ ಪಡೆಯಲಾಗಿದೆ.
ಅಂತೆಯೇ ಕೆ.ಆರ್. ರಸ್ತೆಯ ಜಗಳೂರು ಬಸ್ ನಿಲ್ದಾಣ ಎದುರಿನ ಪವನ್ ಬೆಣ್ಣೆ ದೋಸೆ ಹೋಟೆಲ್ ಮಾಲೀಕ ಬಿ.ಕೆ. ಗಿರೀಶ್ ಸಹ ರೋಗವು ಹರಡುವಂತೆ ಜನರನ್ನು ಗುಂಪು ಕಟ್ಟಿಕೊಂಡು ವ್ಯಾಪಾರ ಮಾಡುತ್ತಿದ್ದಾಗ ಪಿಎಸ್ಐ ಕೆ.ಎನ್. ಶೈಲಜಾ ದಾಳಿ ನಡೆಸಿ, ಈತನನ್ನು ವಶಕ್ಕೆ ಪಡೆದಿದ್ದಾರೆ.