ಹರಪನಹಳ್ಳಿ, ಫೆ.15- ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್‍ಗೆ ಅದೇ ಮಾರ್ಗವಾಗಿ ಚಲಿಸುತ್ತಿದ್ದ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟ ಘಟನೆ ಹರಪನಹಳ್ಳಿ ಅಗ್ನಿಶಾಮಕ ಠಾಣೆ, ಕುರಿಸಂತೆ ಮುಂಭಾಗದ ರಸ್ತೆಯಲ್ಲಿ ಜರುಗಿದೆ.
ಹೊಳಿಯಮ್ಮ (32), ದೊಡ್ಡಹಾಳು ಹನುಮಂತಪ್ಪ (46) ಹಾಗೂ ಲಕ್ಷ್ಮವ್ವ (42) ಮೃತಪಟ್ಟವರು. ಹರಿಹರ ತಾಲ್ಲೂಕಿನ ಹೊಟ್ಟಿಗೇನಹಳ್ಳಿ ಗ್ರಾಮದಿಂದ ಟ್ರ್ಯಾಕ್ಟರ್‍ನಲ್ಲಿ ಕುಟುಂಬ ಸಮೇತ ಕೊಟ್ಟೂರು ಗುರುಬಸವೇಶ್ವರ ದೇವಸ್ಥಾನದಲ್ಲಿ ಜವಳ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು.
ಮಾರ್ಗಮಧ್ಯೆ ರಸ್ತೆಯ ಎಡ ಭಾಗ ಟ್ರ್ಯಾಕ್ಟರ್ ನಿಲ್ಲಿಸಿದ್ದಾಗ ಹರಪನಹಳ್ಳಿ ಯಿಂದ ಸ್ಟೇಷನರಿ ಸಾಮಾನು ತೆಗೆದುಕೊಂಡು ಹೋಗುತ್ತಿದ್ದ ಟಾಟಾ ಏಸ್ ವಾಹನ ಹಿಂದಿನಿಂದ ಟ್ರ್ಯಾಕ್ಟರ್‍ಗೆ ಡಿಕ್ಕಿ ಹೊಡೆದಿದೆ.
ಈ ವೇಳೆ ಹೊಳಿಯಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪೋಲಿಸರು ಕೂಡಲೇ ಹನುಮಂತಪ್ಪನನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದರೆ, ತೀರ್ವವಾಗಿ ಗಾಯಗೊಂಡಿದ್ದ ಇನ್ನೋರ್ವ ಮಹಿಳೆ ಲಕ್ಷ್ಮವ್ವ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಐದು ಜನರು ಗಾಯಗೊಂಡಿದ್ದಾರೆ. ಚಾಲಕ ತಲೆಮರೆಸಿಕೊಂಡಿದ್ದಾರೆ. ಈ ಕುರಿತು ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.