ದಾವಣಗೆರೆ, ಏ.18- ಲಕ್ಕಿ ಡ್ರಾ ನೆಪದಲ್ಲಿ ವ್ಯಕ್ತಿಯೋರ್ವರಿಗೆ ವಂಚಿಸಿರುವ ಘಟನೆ ನಡೆದಿದೆ. ನ್ಯಾಪ್ಟಾಲ್ ಆನ್ಲೈನ್ ಶಾಪಿಂಗ್ ಕಂಪನಿಯಿಂದ ನಗರದ ಕೆ.ಬಿ. ಬಡಾವಣೆಯ ವ್ಯಕ್ತಿಗೆ ಒಂದು ಪತ್ರ ಹಾಗೂ ಅದರ ಜೊತೆಗೆ ಸ್ಕ್ರಾಚ್ ಅಂಡ್ ವಿನ್ ಕೂಪನ್ ಬಂದಿದ್ದು, ಕೂಪನ್ ತೆರೆದು ನೋಡಿದಾಗ ಲಕ್ಕಿ ಡ್ರಾದಲ್ಲಿ 14.80 ಮೌಲ್ಯದ ಮಹೇಂದ್ರ ಎಕ್ಸ್ಯುವಿ ಕಾರು ಬಹುಮಾನವಾಗಿ ಬಂದಿದೆ ಎಂಬುದಾಗಿ ಬರೆಯ ಲಾಗಿತ್ತು. ಇದನ್ನು ನಂಬಿ ಅದರಲ್ಲಿದ್ದ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದಾಗ ಅಪರಿಚಿತನು ನ್ಯಾಪ್ಟಾಲ್ ಆನ್ಲೈನ್ ಕಸ್ಟಮರ್ ಕೇರ್ ಅಧಿಕಾರಿ ಎಂದು ಪರಿಚಯಿಸಿ ಕೊಂಡು ಲಕ್ಕಿ ಡ್ರಾಗೆ ನಿಮ್ಮ ನಂಬರ್ ಆಯ್ಕೆಯಾಗಿದೆ. ಕಾರಿನ ಜೊತೆಗೆ 1.22 ಲಕ್ಷ ರೂ. ಬಹುಮಾನವಾಗಿ ಬಂದಿದೆ ಎಂದು ನಂಬಿಸಿದ್ದಾನೆ. ಇದನ್ನು ನಂಬಿದ ವ್ಯಕ್ತಿ ಯು ಹಂತ ಹಂತವಾಗಿ 26.83 ಲಕ್ಷ ರೂ. ವರ್ಗಾವಣೆ ಮಾಡಿದ್ದು, ಪುನಃ ಅದೇ ನಂಬ ರ್ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ವಂಚನೆಗೊಳಗಾದ ವ್ಯಕ್ತಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
January 28, 2025