ದಾವಣಗೆರೆ, ಫೆ.12- ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತಾಲ್ಲೂಕಿನ ಹೆಬ್ಬಾಳ್ ಗ್ರಾಮದ ಹೊರ ಭಾಗದ ರಾಷ್ಡ್ರೀಯ ಹೆದ್ದಾರಿ-4ರ ಶಿವ ಡಾಬಾದ ಹತ್ತಿರ ಇಂದು ನಡೆದಿದೆ.
ಕಾರು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರಟಿತ್ತು. ಈ ವೇಳೆ ಏಕಾಏಕಿ ಕಾರಿನ ಟೈರ್ ಬ್ಲಾಸ್ಟ್ ಆಗಿದೆ. ಪರಿಣಾಮ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಾಲಕ ಒಬ್ಬರೇ ಇದ್ದು, ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳಾಗಿ, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪಲ್ಟಿಯಾದ ವೇಳೆ ಸ್ಥಳೀಯರು ಕಾರಿನೊಳಗೆ ಸಿಲುಕಿದ್ದ ಚಾಲಕನನ್ನು ರಕ್ಷಣೆ ಮಾಡಿದ್ದಾರೆ.