ಶ್ರೀಗಂಧದ ತುಂಡುಗಳನ್ನು ಹೊತ್ತೊಯ್ಯುತ್ತಿದ್ದ ಕಳ್ಳರಿಗೆ ಜೈಲು ಶಿಕ್ಷೆ

ದಾವಣಗೆರೆ, ಏ.9- ಶ್ರೀಗಂಧದ ತುಂಡುಗಳನ್ನು ಹೊತ್ತೊಯ್ಯುತ್ತಿದ್ದಾಗ ಸಿಕ್ಕಿ ಬಿದ್ದಿದ್ದ ಇಬ್ಬರು ಆರೋಪಿತರಿಗೆ 5 ವರ್ಷ ಗಳ ಜೈಲು ಶಿಕ್ಷೆ ಹಾಗೂ ತಲಾ 50 ಸಾವಿರ ದಂಡ ವಿಧಿಸಿ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ತೀರ್ಪು ನೀಡಿದೆ.

ಚನ್ನಗಿರಿ ತಾಲ್ಲೂಕು ಬಿಆರ್ ಟಿ ಕಾಲೋನಿಯ ಮೂಡಲಗಿರಿ, ಗಂಗಾಧರ ಶಿಕ್ಷೆಗೆ ಗುರಿಯಾದ ಆರೋಪಿಗಳು. 

ಸೆಪ್ಟೆಂಬರ್ 13,2016 ರಂದು ಮೂಡಲಗಿರಿ, ಗಂಗಾಧರ ಹಾಗೂ ಕರಿಯಪ್ಪ ಇವರುಗಳು ಚನ್ನಗಿರಿ ತಾಲ್ಲೂಕು ಹಿರೇಮಳಲಿ ಗ್ರಾಮದ ಎಂಪಿಎಂ ನೆಡುತೋಪಿನಿಂದ ಕರಡಿಮಟ್ಟಿಗೆ ಬರುವ ರಸ್ತೆಯಲ್ಲಿ 5 ಶ್ರೀಗಂಧದ ತುಂಡುಗಳನ್ನು ಹೊತ್ತುಕೊಂಡು ಬರುತ್ತಿದ್ದಾಗ ಶಾಂತಿಸಾಗರ ವಲಯ ಮಾವಿನಕಟ್ಟೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕಂಡಾಕ್ಷಣ ಶ್ರೀಗಂಧದ ತುಂಡುಗಳನ್ನು ಸ್ಥಳದಲ್ಲಿ ಎಸೆದು ಓಡಿ ಹೋಗಲು ಪ್ರಯತ್ನಿಸಿದ್ದರು. ಆಗ ಅರಣ್ಯ ಇಲಾಖೆ ಅಧಿಕಾರಿಗಳು ಮೂಡಲಗಿರಿ ಹಾಗೂ ಗಂಗಾಧರನನ್ನು ಬೆನ್ನತ್ತಿ ಹಿಡಿದುಕೊಂಡಿದ್ದರು. ಆದರೆ ಮತ್ತೋರ್ವ ಆರೋಪಿ ಕರಿಯಪ್ಪ ತಪ್ಪಿಸಿಕೊಂಡು ಓಡಿ ಹೋಗಿದ್ದ. 

ಈ ಬಗ್ಗೆ ಮಾವಿನಕಟ್ಟೆ ಶಾಖೆ ಉಪ ವಲಯ ಅರಣ್ಯಾಧಿಕಾರಿ ದೂರು ದಾಖಲಿಸಿ ದ್ದರು. ವಲಯ ಅರಣ್ಯಾಧಿಕಾರಿಗಳು ತನಿಖೆ ಮಾಡಿ ನ್ಯಾಯಾಲಯಕ್ಕೆ ದೋಷಾರೋ ಪಣಾ ಪಟ್ಟಿ ಸಲ್ಲಿಸಿದ್ದರು. ಆರೋಪಿತರ ವಿರುದ್ದ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪಿತರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಧೀಶರಾದ ಕೆ.ಬಿ. ಗೀತಾ ತೀರ್ಪು ನೀಡಿದ್ದಾರೆ. 

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಸ್.ವಿ. ಪಾಟೀಲ್ ಪ್ರಕರಣ ನಡೆಸಿ ವಾದ ಮಂಡಿಸಿದ್ದರು.

error: Content is protected !!