ಕೂಡ್ಲಿಗಿ, ಏ.9- ತಾಲ್ಲೂಕಿನ ತಾಯಕನಹಳ್ಳಿ ಗ್ರಾಮದಲ್ಲಿ ಕಿರಾಣಿ ಅಂಗಡಿಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸಿಡಿದು ಬಾಲಕಿ ಸೇರಿದಂತೆ ಇಬ್ಬರು ಸಜೀವ ದಹನವಾಗಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.
ತಾಯಕನಹಳ್ಳಿ ಗ್ರಾಮದ ಕೃಷ್ಣ (28) ಹಾಗೂ ಭೂಮಿಕಾ (11) ಎಂಬುವವರು ಸ್ಥಳದಲ್ಲಿಯೇ ಸಜೀವ ದಹನವಾಗಿದ್ದಾರೆ. ಭೂಮಿಕಾ ಮೃತ ಕೃಷ್ಣನ ಅಕ್ಕನ ಮಗಳಾಗಿದ್ದು ಮಾವ, ಸೊಸೆ ಇಬ್ಬರ ಸಾವಿನಿಂದ ಸಂಬಂಧಿಕರ ರೋಧನ ಮುಗಿಲು ಮುಟ್ಟಿತ್ತು. ಗ್ಯಾಸ್ ಸಿಲಿಂಡರ್‌ಗೆ ಆಕಸ್ಮಿಕ ಬೆಂಕಿ ತಗುಲಿದ್ದರಿಂದ ಗ್ಯಾಸ್ ಸ್ಪೋಟಗೊಂಡಿದ್ದು, ಅಂಗಡಿ ಹೊತ್ತಿಕೊಂಡು ಉರಿದಿದೆ. ಏಕಾಏಕಿ ಬೆಂಕಿ ಮುಗಿಲೆತ್ತರಕ್ಕೆ ಉರಿದಿದ್ದರಿಂದ ಶೆಡ್‌ನಿಂದ ಹೊರಬರಲಾಗದೇ ಇಬ್ಬರೂ ಬೆಂಕಿಯಲ್ಲಿ ಬೆಂದು ಸಾವನ್ನಪ್ಪಿದ್ದಾರೆ.
ಸೊಸೆಯನ್ನು ರಕ್ಷಿಸಲು ಹೋಗಿ ಮಾವನೂ ಸಜೀವ ದಹನ : ಸಿಲಿಂಡರ್‌ಗೆ ಆಕಸ್ಮಿಕ ಬೆಂಕಿ ತಗುಲಿ ಬ್ಲಾಸ್ಟ್ ಆದಾಗ ಸೊಸೆ ಭೂಮಿಕಾ ಅಂಗಡಿಯೊಳಗೆ ಇದ್ದಳು. ಮಾವ ಕೃಷ್ಣಪ್ಪ ಅಂಗಡಿಯ ಹೊರಗಡೆ ಇದ್ದರು. ಕೃಷ್ಣಪ್ಪ ತನ್ನ ಜೀವವನ್ನು ಲೆಕ್ಕಿಸದೇ ಸೊಸೆಯನ್ನು ಉಳಿಸಲು ಅಂಗಡಿಯೊಳಕ್ಕೆ ನುಗ್ಗಿದ್ದಾಗ ಸೊಸೆಯ ಜೊತೆಗೆ ಬೆಂಕಿಗೆ ಬಲಿಯಾಗಿದ್ದಾರೆ. ಅಕ್ಕಪಕ್ಕದ ಜನತೆ ನೀರು ತಂದು ಬೆಂಕಿ ಆರಿಸಲು ಹೋದರೂ ಪ್ರಯೋಜನವಾಗಿಲ್ಲ.
ಅಗ್ನಿಶಾಮಕ ಠಾಣೆ ಅಗತ್ಯ : ತಾಲ್ಲೂಕಿನ ಹೊಸಹಳ್ಳಿ ಭಾಗದಲ್ಲಿ ಅಗ್ನಿಶಾಮಕ ಠಾಣೆ ಇಲ್ಲದಿರುವುದರಿಂದ 50 ಕಿ.ಮೀ. ದೂರದ ಕೂಡ್ಲಿಗಿಯಿಂದ ಅಗ್ನಿಶಾಮಕ ವಾಹನಗಳು ಬಂದು ಬೆಂಕಿ ನಂದಿಸಬೇಕಾಗಿದೆ. ಅಷ್ಟರಲ್ಲಿ ಜೀವಹಾನಿ, ಆಸ್ತಿಹಾನಿಯಾಗಿರುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಭಾಗಕ್ಕೆ ಅಗ್ನಿಶಾಮಕ ಠಾಣೆ ಮಂಜೂರು ಮಾಡುವಂತೆ ಒತ್ತಾಯಿಸಿದರು. ಸ್ಥಳಕ್ಕೆ ಅಡಿಷನಲ್ ಎಸ್ಪಿ ಲಾವಣ್ಯ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಹೊಸಹಳ್ಳಿ ಪಿಎಸ್‌ಐ ತಿಮ್ಮಣ್ಣ ಚಾಮನೂರು ಹಾಜರಿದ್ದರು.