ಜಗಳೂರು ಸ್ಫೋಟಕ ಪತ್ತೆ ಪ್ರಕರಣ ತನಿಖೆಯಿಂದ ಸತ್ಯಾಸತ್ಯತೆ ಹೊರಬೀಳಲಿದೆ : ಐಜಿಪಿ

ಜಗಳೂರು, ಫೆ.4- ತಾಲ್ಲೂಕಿನಲ್ಲಿ ಪತ್ತೆಯಾಗಿರುವ ಸಿಡಿಮದ್ದು ಪ್ರಕರಣ ದಲ್ಲಿ ತನಿಖೆಯಿಂದ ಸತ್ಯಾಸತ್ಯತೆ ಹೊರಬೀಳಲಿದೆ. ಎಂದು ಪೂರ್ವ ವಲಯ‌ ಐಜಿಪಿ ರವಿ ಹೇಳಿದರು.

ತಾಲ್ಲೂಕಿನ ತಾಯಿಟೋಣಿ-ಹುಚ್ಚವ್ವನಹಳ್ಳಿ ಮಾರ್ಗದ ಹೊರ ವಲಯದ ಜಮೀನಿನಲ್ಲಿ  ಎರಡು ಗೋದಾಮುಗಳಲ್ಲಿ ಸಂಗ್ರಹಿಸಿದ್ದ  ಕಲ್ಲು ಕ್ವಾರಿ ಸಿಡಿಮದ್ದು ಸಂಗ್ರಹಣೆಯನ್ನು ಉಪವಿಭಾಗಾಧಿಕಾರಿ  ನೇತೃತ್ವದ ತಂಡ ಜಪ್ತಿ ಮಾಡಿತ್ತು.

ಗುರುವಾರ ಸ್ಥಳಕ್ಕೆ  ಆಗಮಿಸಿದ ಐಜಿಪಿ ಹಾಗೂ ಎಸ್‌ಪಿ ನೇತೃತ್ವದ ಪೊಲೀಸ್ ತಂಡ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾಹಿತಿ ನೀಡಿದರು.

ಈಗಾಗಲೇ ಉಪವಿಭಾಗಾಧಿಕಾರಿಗಳ ತಂಡ ಕೊಠಡಿಗಳನ್ನು ವಶಕ್ಕೆ ಪಡೆದಿದ್ದು , ಇಲ್ಲಿ ನೆಲಮಾಳಿಗೆ ಇರುವ ಬಗ್ಗೆ  ಮಾಹಿತಿ  ಇಲ್ಲ. ಈ ಪ್ರಕರಣದಲ್ಲಿ ಕಾನೂನು ನಿಯಮ ಉಲ್ಲಂಘನೆಯಾಗಿದ್ದಲ್ಲಿ ಅಥವಾ ಯಾರದೇ ಕೈವಾಡವಿದ್ದರೂ ತನಿಖೆಯಿಂದ ನಿಖರ ಮಾಹಿತಿ ದೊರೆಯಲಿದ್ದು,  ಸಾರ್ವಜನಿಕರು  ಆತಂಕ ಪಡುವುದು ಬೇಡ  ಎಂದು ತಿಳಿಸಿದರು.

 ಜನವರಿ  21 ರಂದು ನಡೆದಿರುವ ಶಿವಮೊಗ್ಗ ಸ್ಫೋಟದ ಘಟನೆಗೂ ಹಾಗೂ ಇಲ್ಲಿ ದೊರೆತಿರುವ ಸ್ಫೋಟಕಗಳ ಸಂಗ್ರಹಕ್ಕೂ ಸಂಬಂಧವಿದೆ ಎಂಬ   ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ಕುರಿತು ತನಿಖೆಗಾಗಿ ಆಗಮಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ , ಡಿವೈಎಸ್‌ಪಿ ನರಸಿಂಹ ತಾಮ್ರಧ್ವಜ್, ಪೊಲೀಸ್ ವೃತ್ತ ನಿರೀಕ್ಷಕ ಡಿ.  ದುರುಗಪ್ಪ ಹಾಗೂ ಇನ್ನಿತರೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

error: Content is protected !!