ಅಕ್ರಮ ಮಾರಾಟ: 2 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ವಶ

ದಾವಣಗೆರೆ, ಏ.4- ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಅಂತರ್ ರಾಜ್ಯ ಆರೋಪಿತರನ್ನು ಬಂಧಿಸಿರುವ ಇಲ್ಲಿನ ಸಿಇಎನ್ ಅಪರಾಧ ಪೊಲೀಸರು 2 ಲಕ್ಷ 10 ಸಾವಿರ ಮೌಲ್ಯದ 8 ಕೆ.ಜಿ. 600 ಗ್ರಾಂ ಗಾಂಜಾ, ಮೊಬೈಲ್, 900 ನಗದು ವಶಪಡಿಸಿಕೊಂಡಿದ್ದಾರೆ.

ಎಸ್ಪಿ ಹನುಮಂತರಾಯ ಮತ್ತು ಎಎಸ್ಪಿ ಎಂ. ರಾಜೀವ್ ಮಾರ್ಗದರ್ಶನದಲ್ಲಿ ಡಿ.ಸಿ.ಆರ್.ಬಿ. ಪೊಲೀಸ್ ಉಪಾಧೀಕ್ಷಕ ಬಿ.ಎಸ್. ಬಸವರಾಜ್ ನೇತೃತ್ವದಲ್ಲಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್  ಬಿ.ವಿ. ಗಿರೀಶ್ ಮತ್ತು ಸಿಬ್ಬಂದಿಗಳಾದ ಲೋಹಿತ್, ಮಲ್ಲಿಕಾರ್ಜುನ, ಗೋವಿಂದ್ ರಾಜ್, ಕೊಟ್ರೇಶ್, ನಾಗರಾಜ್, ದ್ಯಾಮೇಶ್ ಒಳಗೊಂಡ ತಂಡವು ಇಂದು ನಗರದ ಬಾಡಾ ಕ್ರಾಸ್ ಹತ್ತಿರದ ಪದ್ಮಶ್ರೀ ಚಿಂದೋಡಿ ಲೀಲಾ ರಂಗಲೋಕದ ಹಿಂಭಾಗದ ರಾಷ್ಟ್ರೀಯ ಹೆದ್ದಾರಿ-48ರ ಸರ್ವೀಸ್ ರಸ್ತೆಯ ಪಕ್ಕದ ಮಣ್ಣಿನ ರಸ್ತೆಯಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದಾಗ ದಾಳಿ ಮಾಡಿದೆ.

ಛತ್ತಿಸ್‍ಗಡ ರಾಜ್ಯದ ಬಗುಡೇಗಾ ಗ್ರಾಮದ ಅಂತರಾಮ್ ತಿರ್ಕಿ (21), ಬಳ್ಳಾರಿ ಜಿಲ್ಲೆಯ ಬಂಡೆಬಸಾಪುರ ಗ್ರಾಮದ ಮಧುರಾಜ್ ಅಲಿಯಾಸ್ ಮಧುನಾಯ್ಕ್ ಬಂಧಿತರು. ಗೋವಾದ ಕೋಲ್ವಾ ಬೀಚ್ ಹತ್ತಿರ ವಾಸಿ ಅನಿಲ್ ಜೇಕಬ್ ಈತನ ಪತ್ತೆ ಕಾರ್ಯ ಮುಂದುವರೆದಿದೆ. 

ಈ ಬಗ್ಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

error: Content is protected !!