ದಾವಣಗೆರೆ, ಏ.1- ಅಕ್ರಮವಾಗಿ ಬಂಡೆ ಸ್ಪೋಟಿಸಲು ಸ್ಪೋಟಕಗಳ ದಾಸ್ತಾನು ಮಾಡಿದ್ದ ಜಮೀನಿನ ಮೇಲೆ ದಾಳಿ ನಡೆಸಿ, ಓರ್ವನನ್ನು ಸಂತೆಬೆನ್ನೂರು ಪೊಲೀಸರು ಬಂಧಿಸಿದ್ದಾರೆ.
ಚನ್ನಗಿರಿ ತಾಲ್ಲೂಕು ಕೆರೆಬಿಳಚಿ ಗ್ರಾಮದ ವ್ಯಾಪಾರಿ ಫರ್ವಿಜ್ ಬಂಧಿತನು. ದಾಳಿ ವೇಳೆ ಮತ್ತೋರ್ವ ಆರೋಪಿ ಗಿರೀಶ ಪರಾರಿಯಾಗಿದ್ದು, ಪತ್ತೆ ಕಾರ್ಯ ಮುಂದುವರೆದಿದೆ.
ಕಾಶೀಪುರ ಕ್ಯಾಂಪ್ ಸರ್ವೆ ನಂಬರ್ 20/6 ರ ಜಮೀನಿನಲ್ಲಿ ಬಂಡೆಯನ್ನು ಅಕ್ರಮವಾಗಿ ಸ್ಪೋಟಿಸಲು ಸ್ಪೋಟಕ ಸಾಮಗ್ರಿಗಳನ್ನು ಯಾವುದೇ ಪರವಾನಿಗೆ ಇಲ್ಲದೆ ದಾಸ್ತಾನು ಮಾಡಲಾಗಿತ್ತು. ಜನವರಿ 30 ರಂದು ಎಸ್ಪಿ ಹನುಮಂತರಾಯ, ಎಎಸ್ಪಿ ಎಂ. ರಾಜೀವ್, ಚನ್ನಗಿರಿ ಡಿವೈಎಸ್ಪಿ ಬಿ.ಎಸ್.ಬಸವರಾಜ್, ಸಿಪಿಐ ಆರ್.ಆರ್. ಪಾಟೀಲ್ ಮಾರ್ಗದರ್ಶನದಲ್ಲಿ ಸಂತೇಬೆನ್ನೂರು ಪೊಲೀಸ್ ಠಾಣೆಯ ಪಿಎಸ್ಐ ಶಿವರುದ್ರಪ್ಪ ಎಸ್. ಮೇಟಿ ಹಾಗೂ ಸಿಬ್ಬಂದಿಗಳಾದ ಡಿ. ನಿಂಗಣ್ಣ, ನಾಗರಾಜನಾಯ್ಕ, ಪ್ರಹ್ಲಾದ, ಆಂಜನೇಯ, ಸೋಮಶೇಖರ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎಎಸ್ ಸಿ ತಂಡದ ಸಿದ್ದೇಶ, ಎಸ್.ಎಸ್. ನಾಗರಾಜ್ ಮತ್ತು ರಾಘವೇಂದ್ರ ಒಳಗೊಂಡ ತಂಡ ದಾಳಿ ನಡೆಸಿದೆ. ದಾಸ್ತಾನು ಮಾಡಿದ್ದ 8 ಜಿಲಿಟಿನ್ ಕಡ್ಡಿ, ಒಂದು ಜೀವಂತ ಎಲೆಕ್ಟ್ರಿಕಲ್ ಡೇಟೋನೇಟರ್, ಸುಮಾರು 30 ಮೀಟರ್ ತಂತಿ, ಒಂದು ಮೆಗ್ಗರ್ ಮಿಷನ್ ಸೇರಿದಂತೆ ಸ್ಪೋಟಕಕ್ಕೆ ಸಂಬಂಧಿಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂತೇ ಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಬಂಧಿ ತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.