ದಾವಣಗೆರೆ,ಜ.17- ಇಲ್ಲಿಗೆ ಸಮೀಪದ ಹೊನ್ನೂರಿನಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಆವರಗೆರೆಯ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಸಂಸ್ಥೆಯ ಶ್ರೀ ಗುರು ಪಂಚಾಕ್ಷರಿ ಗವಾಯಿ ಮೆಮೋರಿಯಲ್ ಕಾಂಪೋಜಿಟ್ ಶಾಲೆ ವಿದ್ಯಾರ್ಥಿ ಆರ್. ವಿಕಾಸ್ ಮೃತಪಟ್ಟಿದ್ದಾನೆ.
ಹೊಲದಲ್ಲಿ ಕೆಲಸ ಮುಗಿಸಿ ಟ್ರ್ಯಾಕ್ಟರ್ ಅನ್ನು ತಾನೇ ಚಾಲನೆ ಮಾಡಿಕೊಂಡು ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಟ್ರ್ಯಾಕ್ಟರ್ ನ ಗಾಲಿ ದೊಡ್ಡ ಕಲ್ಲಿನ ಮೇಲೆ ಹತ್ತಿದ ಪರಿಣಾಮ ಸ್ಟೇರಿಂಗ್ ನಿಯಂತ್ರಣಕ್ಕೆ ಸಿಗದೇ ಪಕ್ಕದಲ್ಲಿನ ಆಳಕ್ಕೆ ಉರುಳಿ ಬಿದ್ದ
ಕಾರಣ ವಿಕಾಸ್ ಘಟನಾ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.
ಸುಮಾರು 16 ವರ್ಷ ವಯಸ್ಸಿನ ವಿಕಾಸ್ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯಾಗಿದ್ದು, ಹೊನ್ನೂರು ಗ್ರಾಮದ ರುದ್ರಪ್ಪ ಮತ್ತು ಶಾರದಮ್ಮ ದಂಪತಿಯ ಪುತ್ರ. ಮೃತನ ಅಂತ್ಯಕ್ರಿಯೆಯು ಹೊನ್ನೂರಿನಲ್ಲಿರುವ ಅವರ ಸ್ವಂತ ಜಮೀನಿನಲ್ಲಿ ಇಂದು ಸಂಜೆ ನಡೆಯಿತು.
ವಿಕಾಸ್ ಅಕಾಲಿಕ ನಿಧನಕ್ಕೆ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷ ಎ.ಹೆಚ್. ಶಿವಮೂರ್ತಿ ಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಓದಿನಲ್ಲಿ ಮಾತ್ರವಲ್ಲದೇ, ಆಟೋಟದಲ್ಲೂ ಪ್ರತಿಭಾನ್ವಿತನಾಗಿದ್ದ ಎಂದು ಅವರು ತಿಳಿಸಿದ್ದಾರೆ.