ಕೊಡೋಕೆ ಇಲ್ಲಾ..ಕುಡಿಯೋಕೆ ಐತಿ!

ಕೊಟ್ರ: ಏನಲೇ ಕೊಟ್ರ ಕೊರೊನಾ ಸ್ಕೋರು?

ಈರ : ಇವತ್ತು ಮೇಡನ್ ಓವರೂ. ರನ್ನೂ ಇಲ್ಲ ಪುಣ್ಯಕ್ಕೆ ವಿಕೆಟ್ಟೂ ಬಿದ್ದಿಲ್ಲ.

ಕೊಟ್ರ: ಸಮಾಧಾನದ ವಿಷಯ. ಹಿಂಗೇ ಮುಂದುವರಿಬೇಕು ನೋಡು.

ಈರ: ಅಣ್ಣಾ, ಕಲಾ ಮಂಜಣ್ಣ ಹೇಳ್ತಿದ್ದ ಇನ್ನೂ ಇದಾವೆ ಓವರೂ !

ಕೊಟ್ರ: ಹೌದೋ, ಕೊರೊನಾ ತನ್ನ ಸ್ಟಾಕಿನಾಗೆ ಇಟ್ಕಂಡತಿ. ಒಂದೊಂದೇ ಒಗಿತಿರತಿ. ನಾವು ಡಿಫೆನ್ಸ್ ನಾಗೆ ಆಡುತಿರಬೇಕು.
ಎಲ್ಲಾ ಓವರೂಗಳು ಮುಗಿಯೋತನಕ ಆಡ್ತಿರಬೇಕು. ಸ್ವಲ್ಪ ಎಚ್ಚರಾ ತಪ್ಪಿದ್ವೋ, ಕ್ವಾರಂಟೈನ್ ಮನೆಯಾಗಿಂದ ಎತ್ತಿಕೊಂಡು ಬರತಿ.
ಮತ್ತೆ ಹೊಸ ಬೌಲ್‌ಗಳನ್ನು ಕ್ವಾರಂಟೈನ್ ಮನಿಯಾಗೆ ತುಂಬುತೈತಿ.

ಈರ: ಹೇ, ಇದನ್ನು ಫ್ರೀ ಬಿಟ್ರೇ… ಮರಿ ಹಾಕ್ಯಂತಾನೇ ಇರತಿ.?     

ಕೊಟ್ರ: ನಮ್ಮ ಬಿಜಾಪುರದ ಕೌಳಿಗೇಟ್ ಸಂಪಣ್ಣ, ತಗಣಿ ಬಗ್ಗೆ ಒಂದು ಹಾಡು ಹೇಳ್ತಿದ್ದ. `ಅಗಣಿತ ಮರಿಗಳ ಹಡೆಯುವ ತಗಣಿ’ ಅಂತಾ. ಆದರೆ, ಇದೋ… ಅಗಣಿತಾಗಣಿತ ಮರಿ ಹಾಕುವ ಕೊರೊನಾ!

ಈರ: ಕೊರೊನಾ ವಿಷಯ ಬಿಡು. ಸದ್ಯಕ್ಕೆ ನಮ್ಮೂರಾಗೆ ಎಣ್ಣೆ ಅಂಗಡಿ ತಗೀಲಿಲ್ಲದ್ದು ಒಳ್ಳೇದಾತು ನೋಡು. ಅದೂ ಅಲ್ಲದೇ ಮಧ್ಯಾಹ್ನ ಒಂದು ಗಂಟೆಗೇ ಎಲ್ಲಾ ಬಂದ್. ವಾತಾವರಣ ಶಾಂತವಾಗಿ ಐತಿ.

ಕೊಡೋಕೆ ಇಲ್ಲಾ..ಕುಡಿಯೋಕೆ ಐತಿ! - Janathavaniಕೊಟ್ರ: ತಮ್ಮಾ ಹೊರಗಡೆಯಿಂದ ಮಾತ್ರ ಎಣ್ಣೆ ಬಂದಾಗೇತಿ. ಒಳಗಿಂದೊಳಗೇ ಬೇರೆ ಊರಿಂದ ತರಿಸ್ಕೆಂಡು ಕುಡಿಯಕತ್ತ್ಯಾರೆ! ಕಡೇ ಮನೆ ಕಲಾವಿದ ಹೇಳ್ತಿದ್ದ. ಬಡವರಿಗೆ ಅನ್ನ ಕೊಡೋಣ. ಸಂಘ-ಸಂಸ್ಥೆಗಳಿಗೆ ಸ್ವಲ್ಪ ರೊಕ್ಕಾ ಕೊಡ್ರೋ ಅಂತಾ ಕೆಲವು ದೊಡ್ಡ ಮಂದಿಗೆ ಕೇಳಿದ್ದನಂತೆ. ದೋಸ್ತಾ, ನಮಗೂ ರೊಕ್ಕದ್ದು ಭಾಳ ಟೈಟಾಗೇತಿ ಅಂದಿದ್ದ ಕೆಲವರು ತಾವು ಮಾತ್ರ ಟೈಟಾಗಕೆ ರೊಕ್ಕ ಬಿಚ್ಚ್ಯಾರೆ ನೋಡು! ಒಳ್ಳೆಯ ಕೆಲಸಕ್ಕೆ ಇವರಿಗೆ ಕೊಡೋಕೆ ರೊಕ್ಕ ಇಲ್ಲ. ಕುಡಿಯಾಕೆ ಐತಿ!

ಈರ : ಹುಬ್ಬಳ್ಳಿಯಾಗಿರೋ ದೊಡ್ಡಬಸಪ್ಪರ ಮಗ ಶಿವಣ್ಣ ಫೋನ್ ಮಾಡಿ ಹೇಳಿದ. ಎಣ್ಣೆ ಅಂಗಡಿ ಮುಂದೆ ಜನ ಹೆಂಗೆ ಕ್ಯೂ ನಿಂತಾರೆ ಅಂತಾ ನೋಡೋಕೆ ಹೋಗಿದ್ದನಂತೆ. ಅಲ್ಲಿ ಕೆಲವರನ್ನು ನೋಡಿ ತಲೆ ತಿರಗಂಗೆ ಆತಂತೆ. ಸ್ವಾಮಿ ನಾವು ಬಡವರು. ಕೈಯಾಗೆ ಕಾಸಿಲ್ಲ. ಮನೆಯಾಗಿರೋ ಮಕ್ಕಳು ಮರಿಗೆ ಅನ್ನ ಮಾಡಿ ಹಾಕೋಕೆ ದುಡ್ಡಿಲ್ಲ. ದಯವಿಟ್ಟು ಸ್ವಲ್ಪ ರೊಕ್ಕ ಕೊಡ್ರಿ ಅಂತಾ ಇಸಗೊಂಡು ಹೋಗಿದ್ದರಂತೆ. ಅಲ್ಲಿ ನೋಡಿದ್ರೇ, ಅದೇ ಮಂದಿ ಎಣ್ಣೆ ಅಂಗಡೀಲಿ ಅಂಡರ್ ವೇರ್ ನಿಂದ ರೊಕ್ಕ ತೆಗೆದು ಬಾಟ್ಲಿ ಖರೀದಿ ಮಾಡ್ತಿದ್ದರಂತೆ! ಈ ವಿಷಯಕ್ಕೆ, ಅವರಿಗೆ ಬಡತನ ಇಲ್ಲ ನೋಡು.

ಕೊಟ್ರ : ನೋಡಪಾ. ನಾನಂತೂ ಸದ್ಯಕ್ಕೆ ಎಣ್ಣೆನೇ ಮುಟ್ಟಬಾರದು ಅಂತಾ ತೀರ್ಮಾನ ಮಾಡೇನಿ.

ಈರ : ಯಾಕೆ?

ಕೊಟ್ರ : ಹೆಂಗಿದ್ರೂ ತಿಂಗಳಿಂದ ಬಿಟ್ಟೇವಿ. ಆರೋಗ್ಯನೂ ಸುಧಾರಿಸೇತಿ. ತೆವಲಿಗೆ ಈಗ ಶುರು ಹಚ್ಕೆಂಡವಿ ಅಂತ ಇಟ್ಕಾ. ಮತ್ತೆ ಮತ್ತೆ ಬೇಕು ಅನಿಸ್ತತಿ. ಈಗೇನೋ ಸಿಗ್ತತಿ, ತರಿಸ್ಕ್ಯ ಬಹುದು. ಸ್ಟಾಕೆಲ್ಲಾ ಖಾಲಿಯಾದ ಮೇಲೆ ಎಲ್ಲಿಂದ ತರಿಸ್ತೀ?                  

ಈರ : ಮತ್ತೇ, ಎಣ್ಣೆ ಫ್ಯಾಕ್ಟರಿಯಿಂದ ಬರ್ತಾವು.                                                                            

ಕೊಟ್ರ: ಲೇ ಫ್ಯಾಕ್ಟರಿಗಳೇ ಸದ್ಯಕ್ಕೆ ಬಂದ್ ಆಗ್ಯಾವು. ಎಣ್ಣೆ ಎಲ್ಲಿಂದ ಬರ್ತತಿ. ಏನು ಆಕಾಶದಿಂದ ಉದುರ್ತತಾ.

ಈರ: ಹಂಗಾರೇ ತಗೋಳ್ಳೊರೆಲ್ಲಾ ತಗಳ್ರಪಾ ಅಂತಾ ಬಿಟ್ಟುಬಿಡಬೇಕು. ಎಣ್ಣೆ ಜಲ್ದಿ ಖಾಲಿ ಆಗ್ತತಿ. ಸ್ಟಾಕೇ ಇರಲ್ಲ. ಆಟೋಮ್ಯಾಟಿಕ್ ಆಗಿ ಎಣ್ಣೇನು ಬಂದ್.                                                                                                     

ಕೊಟ್ರ: ಅಲ್ಲಲ್ಲಿ ನಮ್ಮ ಕೆಲವು ಮಂದಿ ಬಾರ್ ಮಾಡ್ಕೆಂಡು ಕುಡಿಯೋದು ತಪ್ಪತತಿ.                                                                                                

ಈರ: ಈಗ ಯಾವ ಬಾರು ತೆಗದಾವೋ?                                                                                                                                   

ಕೊಟ್ರ: ನೋಡಪಾ ಕೆಲವು ದೊಡ್ಡ ಜನಕ್ಕೆ ಕ್ಯೂನಾಗೆ ನಿಲ್ಲೋಕೆ ಕಷ್ಟ. ದೊಡ್ಡ ಮನುಷ್ಯ ಎಣ್ಣೇ ತಗೋಳಾಕೆ ಕ್ಯೂನಾಗೆ ನಿತ್ಗಂಡಾನೆ ನೋಡ್ರೋ ಅಂತಾ ಮಂದಿ ಆಡ್ಕೆಂತಾರೆ. ಕದ್ದು ಮುಚ್ಚಿ ತರಿಸ್ಕೆಂಡಾಗ ಮನೆಯಾಗೆ ಕುಡಿಯಂಗಿಲ್ಲ.                

ಈರ: ಯಾಕೆ?                                                                                                                             

ಕೊಟ್ರ: ಹೆಂಡತಿ ಹಣೀತಾಳೆ. ಮತ್ತಿನೇನು ಮಾಡೋದು ಅಂತಾ ಗೊತ್ತಿಲ್ಲದಂಗೆ ತರಿಸ್ಕೆಂಡು. ಕತ್ತಲಾದ ಮ್ಯಾಲೆ ಮೆಲ್ಲಕೆ ಹೊರಗೆ ಬರ್ತಾರೆ. ಹೊರಗಡೆ ನಿಲ್ಲಿಸಿರೋ ಕಾರಿನೊಳಗೆ ಎಲ್ಲಾ ಸೆಟ್ ಮಾಡ್ಕೆಂತಾರೆ. ಆಮ್ಯಾಲೆ ಕಾರಿನ ಡೋರ್ ಗ್ಲಾಸ್ ಮುಚ್ಕೆಂಡು, ಒಳಗಡೆ ಡಿಮ್ ಲೈಟು-ಎ.ಸಿ. ಹಾಕ್ಯಂಡೂ, ಎಣ್ಣೆನಾ ಲಿಪ್ ಮೂಲಕ ಸಿಪ್ ಬೈ ಸಿಪ್ ಹೀರ್ತಾರೆ. ಜೊತೆಗೆ ಕಾರ್ ಸ್ಟಿರಿಯೋ ಹಾಡು ಹೇಳ್ತಿರ್ತತಿ. ಮಿಂಚಾಗಿ ನೀನು ಬರಲು ಕೂತಲ್ಲಿಯೇ ಚಳಿಗಾಲ ಬೆಚ್ಚಗೆ ನೀ ಜೊತೆಗಿರಲು…. ಹೆಂಗೈತಿ ಅವರ ಬಾರು?                                        

ಈರ: ಇದು ಯಾವ ಬಾರು?                                                                                                                              

ಕೊಟ್ರ: ಕಾರೋಬಾರು!

ಕೊಡೋಕೆ ಇಲ್ಲಾ..ಕುಡಿಯೋಕೆ ಐತಿ! - Janathavani

ಆರ್.ಟಿ. ಅರುಣ್‌ಕುಮಾರ್
[email protected]

error: Content is protected !!