ಅಡಿಕೆ ತೋಟಗಳಲ್ಲಿ ಉಳುಮೆ ಮಾಡಬೇಕೆ, ಬೇಡವೇ..?

ಅಡಿಕೆ ತೋಟಗಳಲ್ಲಿ ಉಳುಮೆ ಮಾಡಬೇಕೆ, ಬೇಡವೇ..?

ಇತ್ತೀಚೆಗೆ ನಮ್ಮ ಅಡಿಕೆ ಬೆಳೆ ರೈತರಲ್ಲಿ ಬೇಸಾಯದ ಬಗ್ಗೆ ಸಾಕಷ್ಟು ಅನುಮಾನಗಳಿವೆ. ತೋಟಗಳಲ್ಲಿ ಉಳುಮೆ ಮಾಡುವುದರಿಂದಾಗುವ ಉಪಯೋಗಗಳೇನು?, ಉಳುಮೆ ಮಾಡದಿದ್ದರೆ ಆಗುವ ಅನಾನುಕೂಲಗಳೇನು?, ವರ್ಷಕ್ಕೆ ಎಷ್ಟು ಬಾರಿ ಉಳುಮೆ ಮಾಡಬೇಕು. ಹೀಗೆ ರೈತರಲ್ಲಿ ಹಲವು ಪ್ರಶ್ನೆಗಳಿವೆ. ಉಳುಮೆ ಅಡಿಕೆ ತೋಟದಲ್ಲಿ ಮಾಡುವ ಸಹಜ ಬೇಸಾಯ ಕ್ರಮ. ಆದರೂ ನಮ್ಮ ರೈತರ ಅಭಿಪ್ರಾಯ ಒಂದೊಂದು ರೀತಿ.

ಉಳುಮೆ ಮಾಡುವುದು ಜಮೀನಿನ ಬೇಸಾಯ ಕ್ರಮಗಳ ಮೇಲೆ ಹಾಗೂ ಮಣ್ಣಿನ ಗುಣ ಧರ್ಮಗಳ ಮೇಲೆ ನಿಂತಿರುತ್ತದೆ. ಹಾಗೂ ಉಳುಮೆ ಮಾಡುವುದಕ್ಕಿಂತ ಮುಂಚೆ ಅಡಿಕೆ ಮರಗಳ ಬೇರುಗಳ ರಚನೆ ಬಗ್ಗೆ ತಿಳಿಯುವುದು ಉತ್ತಮ. 

ಅಡಿಕೆ ಮರವು  ಏಕದಳ ಜಾತಿಗೆ ಸೇರಿರುವುದರಿಂದ ಸಣ್ಣ ವಯಸ್ಸಿನಲ್ಲಿ ಅಡಿಕೆ ಮರದ ಬೇರುಗಳು ಗಿಡದ ಬುಡದಲ್ಲಿಯೇ ಇರುತ್ತವೆ. ನಂತರ ಗಿಡವು ಬೆಳೆದು ದೊಡ್ಡದಾದಂತೆ ಬೇರುಗಳು ಬುಡದಿಂದ ದೂರಕ್ಕೆ ಬೆಳೆಯುತ್ತವೆ. 10 ವರ್ಷಕ್ಕಿಂತ ಮೇಲ್ಪಟ್ಟ ಗಿಡಗಳಲ್ಲಿ ಆಹಾರ ಮತ್ತು ನೀರನ್ನು ಹೀರಿಕೊಳ್ಳುವಂತಹ ಬೇರುಗಳು 2 ಅಡಿ ದೂರದಲ್ಲಿರುತ್ತವೆ.

ಹಾಗಾದರೆ ಅಡಿಕೆ ಮರಗಳ ಬೇರುಗಳು ಆಳವಾಗಿ ಹೋಗುವುದಿಲ್ಲವೇ? 

ಅಡಿಕೆ ಮರಗಳ ಬೇರುಗಳು ಅಗಲವಾಗಿ ಬೆಳೆಯುತ್ತವೆ, ಆಳವಾಗಿ ಬೆಳೆಯುವುದಿಲ್ಲ. ಅಡಿಕೆ ಮರದ ಬೇರುಗಳು ಗಿಡದ ವಯಸ್ಸಿಗೆ ಅನುಗುಣವಾಗಿ ಮರದಿಂದ ದೂರವಿರುತ್ತವೆ. ಆದರೆ ರೈತರಿಗೆ ಇರುವ ಒಂದು ಆಲೋಚನೆ ಎಂದರೆ, ನಾವು ಉಳುಮೆ ಮಾಡುವಾಗ ಬೇರು ತುಂಡಾಗಿ ಇಳುವರಿ ನಷ್ಟ ಆಗುತ್ತದೆ ಎಂದು. ಸಾಮಾನ್ಯವಾಗಿ ರೈತರು ಉಳುಮೆ ಮಾಡುವಾಗ ಟ್ರ್ಯಾಕ್ಟರ್ ಬಳಸಿ, ರೋಟಾವೇಟರ್, ಡಿಸ್ಕ್, ನೇಗಿಲು, ಬಲರಾಮ ನೇಗಿಲು, ಕಲ್ಟಿವೇಟರ್ ಚೈನ್ ಸ್ಲಾಷರ್ ಗಳಿಂದ ಉಳುಮೆ ಮಾಡುತ್ತಾರೆ. 

ಬಾಂಡ್ಲಿ ಹೊಡೆಯುವುದರಿಂದ ಬೇರುಗಳಿಗೆ ತೊಂದರೆಯೇ?

 ಖಂಡಿತಾ ಇಲ್ಲ. ಬಾಂಡ್ಲಿ ಹೊಡೆಯುವಾಗ ಯಂತ್ರವು ಕೇವಲ ನಾಲ್ಕು ಇಂಚು ಮಾತ್ರ ಆಳಕ್ಕೆ ಹೋಗುತ್ತದೆ. ಆಹಾರ  ಮತ್ತು ನೀರನ್ನು ಸರಬರಾಜು ಮಾಡುವ ಬೇರುಗಳು ಎರಡು ಅಡಿ ಆಳ ಮತ್ತು ಅಗಲ ಇರುವುದರಿಂದ ಬೇರುಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಆದರೆ ಬಾಂಡ್ಲಿ ಹೊಡೆಯುವಾಗ ಗಿಡದ ಹತ್ತಿರ ಉಳುಮೆ ಮಾಡುವ ಸಂದರ್ಭದಲ್ಲಿ, ಮೇಲೆ ಇರುವ ಬೇರುಗಳು ತುಂಡಾಗುತ್ತವೆ. ಹೀಗೆ ತುಂಡಾದ ಬೇರುಗಳೆಲ್ಲವೂ  ಆಧಾರ ಬೇರುಗಳು. ಇವುಗಳು ಕತ್ತರಿಸಿದ ಸಂದರ್ಭದಲ್ಲಿ ನಮಗೆ ಸೆಕೆಂಡರಿ ಇನ್ಫೆಕ್ಷನ್ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಉಳುಮೆ ಮಾಡುವ ಸಂದರ್ಭದಲ್ಲಿ ಭಾರವಾದ ಕಲ್ಲನ್ನು ಇಟ್ಟು ಉಳುಮೆ ಮಾಡುವುದು ಹಾಗೂ ಗಿಡದ ಬುಡದ ಹತ್ತಿರ ಉಳುಮೆ ಮಾಡುವುದನ್ನು ರೈತರು ಆದಷ್ಟು ನಿಯಂತ್ರಿಸಬೇಕು.

 ಬಲರಾಮ ನೇಗಿಲು ಹೊಡೆಯುವುದು ಸೂಕ್ತವೇ?

 ಬಲರಾಮ ನೇಗಿಲು ಹೆಚ್ಚು ಆಳಕ್ಕೆ ಹೋಗಿ ಮಣ್ಣನ್ನು ತಿರುವಿ ಹಾಕುವುದರಿಂದ ಮಣ್ಣಿನಲ್ಲಿರುವ ತಂತು ಬೇರುಗಳು  ತುಂಡಾಗುತ್ತವೆ ಹಾಗೂ ಬಲರಾಮ ನೇಗಿಲು ಹೊಡೆಯುವುದ ರಿಂದ ಮಣ್ಣಿನ ಕಣಗಳು ಹೆಚ್ಚು ತೆರೆದುಕೊಂಡು ನೀರನ್ನು ಬಹಳಷ್ಟು ಪ್ರಮಾಣದಲ್ಲಿ ಹೀರಿಕೊಳ್ಳುತ್ತವೆ. ಆಗ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿ, ಮುಂದಿನ ವರ್ಷದ ಇಳುವರಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ತೇವಾಂಶ ಹೆಚ್ಚಾದಾಗ ಇಂಗಾರ ಕೊಳೆ ರೋಗದ ಬಾಧೆ ಹೆಚ್ಚಾಗುತ್ತದೆ. ಆದ್ದರಿಂದ ಬಲರಾಮ ನೇಗಿಲು ಹೊಡೆಯುವುದು ತೋಟಗಳಲ್ಲಿ ಸೂಕ್ತವಲ್ಲ.

 ರೋಟಾವೇಟರ್ ಹೊಡೆಯುವುದು ಸೂಕ್ತವೇ ?

 ರೋಟಾವೇಟರ್ ಬಳಸಿ ನಾವು ಅಡಿಕೆ ತೋಟಗಳಲ್ಲಿ ಉಳುಮೆ ಮಾಡುವುದರಿಂದ ನಮಗೆ ಭೂಮಿಯ ಮೇಲೆ ಬೆಳೆದಿರುವ ಕಳೆ ಮತ್ತು ಹುಲ್ಲು ಕತ್ತರಿಸುವುದೇ ಹೊರತು ಮಣ್ಣನ್ನು ಉಳುಮೆ ಮಾಡುವುದಿಲ್ಲ. ಇದರಿಂದ ನಮಗೆ ಕತ್ತರಿಸಿದ ಹುಲ್ಲು ಹೊದಿಕೆಯ ರೂಪದಲ್ಲಿ ಮಣ್ಣಿನ ಮೇಲೆ ಇರುತ್ತದೆ. ಇದರಿಂದ  ಭೂಮಿಯಿಂದ ತೇವಾಂಶವು ಕಳೆದು ಹೋಗುವುದನ್ನು ನಿಯಂತ್ರಿಸಬಹುದು.

ಚೈನ್ ಸ್ಲಾಷರ್ ಮೂಲಕ ಉಳುಮೆ ಸೂಕ್ತವೇ ?

 ಚೈನ್ ಸ್ಲಾಷರ್ ಮೂಲಕ ಉಳುಮೆ ಮಾಡುವುದರಿಂದ  ಕಳೆಗಳು ಹೊಲದ ತುಂಬಾ ತುಂಡಾಗಿ ಭೂಮಿಯ ಮೇಲೆ ಹೊದಿಕೆಯ ರೂಪದಲ್ಲಿ ಬೀಳುವುದರಿಂದ ನಮಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ.

ಒಟ್ಟಾರೆಯಾಗಿ ಅಡಿಕೆ ತೋಟಗಳಲ್ಲಿ ಉಳುಮೆ ಯಾವ ಭೂಮಿಯಲ್ಲಿ ಮಾಡಬೇಕು?

 ಅಡಿಕೆ ತೋಟಗಳಲ್ಲಿ ಉಳುಮೆ ಮಾಡುವ ಸಂದರ್ಭದಲ್ಲಿ ಮಣ್ಣಿನ ಭೌತಿಕ, ರಾಸಾಯನಿಕ ಗುಣಗಳನ್ನು ಗಮನದಲ್ಲಿಟ್ಟುಕೊಂಡು ಉಳುಮೆ ಮಾಡಿದರೆ ಉತ್ತಮ. ಯಾವ ಮಣ್ಣಿನಲ್ಲಿ ಕಣಗಳ ಮೂಲಕ ಉಸಿರಾಟ ಚೆನ್ನಾಗಿರುತ್ತದೆಯೋ ಅಂತಹ ಮಣ್ಣಿನಲ್ಲಿ  ಸಾಮಾನ್ಯವಾಗಿ ಉಳುಮೆಯ ಅವಶ್ಯಕತೆ ಇರುವುದಿಲ್ಲ. ಕಪ್ಪು ಮಣ್ಣು ಅಥವಾ ಎರೇಮಣ್ಣಿನಲ್ಲಿ ಅಡಿಕೆ ತೋಟ ಮಾಡಿದ ಸಂದರ್ಭದಲ್ಲಿ  ಅಂತಹ ಭೂಮಿಗಳು  ನೀರು ಹೆಚ್ಚು ಬಿಟ್ಟ ಸಂದರ್ಭದಲ್ಲಿ ತೇವಾಂಶವನ್ನು ಬೇಗ ಬಿಟ್ಟು ಕೊಡುವುದಿಲ್ಲ. ಅದೇ ತೇವಾಂಶ ಕಡಿಮೆಯಾದರೆ ಭೂಮಿ ಗಟ್ಟಿಯಾಗಿ ಬಿಡುತ್ತದೆ. ಅಂತಹ ಸಂದರ್ಭದಲ್ಲಿ ಬೇರುಗಳಿಗೆ ಉಸಿರಾಡಲು ಉಳುಮೆಯ ಅವಶ್ಯಕತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಪ್ರತಿ ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ಭೂಮಿಯನ್ನು ಉಳುಮೆ ಮಾಡುವ ಅವಶ್ಯಕತೆ ಇರುತ್ತದೆ. ಮರಳು ಮಿಶ್ರಿತ ಗೋಡು ಮಣ್ಣಿನಲ್ಲಿ ಯಾವುದೇ ರೀತಿಯ ಉಳುಮೆಯ ಅವಶ್ಯಕತೆ ಇರುವುದಿಲ್ಲ. ಆದರೂ ಉಳುಮೆ ಎನ್ನುವುದು ರೈತರ ಬೇಸಾಯ ಕ್ರಮದ ಅಳವಡಿಕೆಯ ಮೇಲೆ ನಿರ್ಧಾರವಾಗುತ್ತದೆ.

 ಮುಖ್ಯವಾಗಿ ಸಹಜ ಕೃಷಿ ಮಾಡುವ ರೈತರು ಅಂದರೆ ತುಂಬಾ ವರ್ಷಗಳಿಂದ ಉಳುಮೆ ಮಾಡದೆ ಹಾಗೆಯೇ ಅಡಿಕೆ ತೋಟಗಳನ್ನು ನಿರ್ವಹಿಸುತ್ತಿರುವವರು ಸಹಜ ಕೃಷಿಯನ್ನು ಮುಂದುವರೆಸಬಹುದು. ಅಂತಹ ಭೂಮಿಯಲ್ಲಿ ಬೇರುಗಳ ಉಸಿರಾಟ ಪ್ರಕ್ರಿಯೆ ಹಾಗೂ ಮಣ್ಣಿನಲ್ಲಿ ಜೈವಿಕ ಕ್ರಿಯೆ ತುಂಬಾ ಉತ್ತಮವಾಗಿರುತ್ತದೆ. ಮುಂಬರುವ ದಿನಗಳಲ್ಲಿ ಸಹಜ ಕೃಷಿಯೇ ಅನಿವಾರ್ಯವಾಗಬಹುದು.

 ರೈತರಿಗೆ ಕಿವಿಮಾತು : ನೀವು ತೋಟವನ್ನು ಉಳುಮೆ ಮಾಡುವ ಸಂದರ್ಭದಲ್ಲಿ ಹಸಿರೆಲೆ ಗೊಬ್ಬರಗಳ ಬೀಜವನ್ನು ಚೆಲ್ಲಿ ಉಳುಮೆ ಮಾಡುವುದು ಉತ್ತಮ. ಇದರಿಂದ ನೀವು ತೋಟಕ್ಕೆ ಸಹಜ ಕ್ರಿಯೆಯಿಂದ ಪೋಷಕಾಂಶಗಳನ್ನು ಕೊಟ್ಟ ಹಾಗೆ ಆಗುತ್ತದೆ. ತೋಟವನ್ನು ಕಳೆ ಮುಕ್ತವಾಗಿಡಲು ಇದು ಸಹ ನಮಗೆ ಸಹಾಯವಾಗುತ್ತದೆ. ರೈತ ಬಾಂಧವರೇ ನಿಮ್ಮ ಜಮೀನಿನ ಮಣ್ಣಿನ ಗುಣ ಧರ್ಮದ ಆಧಾರದ ಮೇಲೆ ಉಳುಮೆ ಮಾಡುವುದೋ… ಬೇಡವೋ ಎಂಬುದನ್ನು ನೀವೇ ನಿರ್ಧರಿಸಿ.


ಬಸವನಗೌಡ ಎಂ. ಜಿ.
ತೋಟಗಾರಿಕೆ ವಿಜ್ಞಾನಿಗಳು
ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರ ದಾವಣಗೆರೆ.
[email protected]

error: Content is protected !!