ಮಲೇಬೆನ್ನೂರು, ಏ. 1 – ಕೊಕ್ಕನೂರು ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿ ಶನಿವಾರ ಗ್ರಾಮದ ಎಲ್ಲಾ ಮನೆಗಳಿಗೆ ಸಂದರ್ಶನ ನೀಡಿದಾಗ ಭಕ್ತರು ಪಲ್ಲಕ್ಕಿಗೆ ಹಾಕಿದ್ದ ನೋಟುಗಳ ಹಾರಗಳು ಎಲ್ಲರ ಗಮನ ಸೆಳೆದವು.
ಪ್ರತಿ ವರ್ಷ ರಥೋತ್ಸವ ಜರುಗಿದ ಮರುದಿನ ಶ್ರೀ ಆಂಜನೇಯ ಸ್ವಾಮಿಯ ಗ್ರಾಮ ದೇವತೆ ಶ್ರೀ ದುರ್ಗಾಂಬಿಕ ದೇವಿ ಮತ್ತು ಜಿ.ಟಿ. ಕಟ್ಟಿ ಹಾಗೂ ಕೊಮಾರನಹಳ್ಳಿಯ ಬೀರ ದೇವರುಗಳೊಂದಿಗೆ ಗ್ರಾಮದ ಮನೆಗಳಿಗೆ ಭೇಟಿ ನೀಡುವ ಪದ್ಧತಿ ಮೊದಲಿನಿಂದಲೂ ನಡೆದು ಕೊಂಡು ಬಂದಿದೆ.
ದೇವರುಗಳು ಆಗಮಿಸುವ ಮುನ್ನ ಗ್ರಾಮದ ಪ್ರತಿ ಮನೆಯ ಮುಂದೆ ನೀರು ಹಾಕಿ ರಂಗೋಲಿ ಬಿಡಿಸಿ ಹಣ್ಣು, ಕಾಯಿ ಹಾಗೂ ಅವರವರ ಶಕ್ತಿ ಅನುಸಾರ ಕಾಣಿಕೆ ಹಣವನ್ನು ಹಾರಗಳನ್ನಾಗಿ ಮಾಡಿಟ್ಟುಕೊಂಡಿರುತ್ತಾರೆ.
ದೇವರುಗಳ ಉತ್ಸವ ಬಂದಾಗ ಭಕ್ತರು ಹಣ್ಣು-ಕಾಯಿ ಪೂಜೆ ಮಾಡಿಸಿ ನೋಟಿನ ಹಾರವನ್ನು ದೇವರ ಪಲ್ಲಕ್ಕಿಗೆ ಹಾಕಿ ಭಕ್ತಿ ಸಮರ್ಪಿಸುತ್ತಾರೆ.
ಬೆಳಿಗ್ಗೆ 9 ಗಂಟೆಯಿಂದ ಪ್ರಾರಂಭವಾದ ದೇವರು ಗಳ ಮನೆ ಸಂದರ್ಶನ ಸಂಜೆ ವೇಳೆಗೆ ಮುಕ್ತಾಯವಾಯಿತು. ದೇವರುಗಳು ದೇವಸ್ಥಾನಕ್ಕೆ ವಾಪಸ್ಸಾದ ನಂತರ ಪಲ್ಲಕ್ಕಿಗೆ ಹಾಕಿದ ನೋಟುಗಳ ಹಾರಗಳನ್ನು ತೆಗೆದು ಎಣಿಕೆ ಮಾಡಲಾಯಿತು.
ಹನುಮಪ್ಪನ ಪಲ್ಲಕ್ಕಿಗೆ ಹಾಕಿದ ಕಾಣಿಕೆ ಹಣ 12,63,199 ಲಕ್ಷ ರೂ. ಸಂಗ್ರಹವಾಗಿದೆ ಎಂದು ಹೇಳಲಾಗಿದೆ.
ಪೊಲೀಸ್ ಇಲಾಖೆಯ ರಕ್ಷಣೆ ಪಡೆಯದೇ ಗ್ರಾಮಸ್ಥರೇ ಬಹಳ ಕಾಳಜಿ ಹಾಗೂ ಜವಾಬ್ದಾರಿಯಿಂದ ದೇವರುಗಳ ಈ ಉತ್ಸವ ನಡೆಸಿಕೊಂಡು ಬರುತ್ತಿರುವುದು ಮಾದರಿಯಾಗಿದೆ. ಕೊಕ್ಕನೂರು ಹನುಮಪ್ಪ ಎಂದರೆ ಗ್ರಾಮಸ್ಥರಿಗೆ ಮಾತ್ರ ಅಲ್ಲದೆ ಸುತ್ತಮುತ್ತಲಿನ ಎಲ್ಲಾ ಜನರಿಗೂ ಭಯ-ಭಕ್ತಿ ಹೆಚ್ಚಾಗಿರುವುದರಿಂದ ಇಲ್ಲಿ ಹಣದ ಯಾವುದೇ ವ್ಯತ್ಯಾಸ ಆಗುವುದಿಲ್ಲ, ಪ್ರತಿಯೊಬ್ಬರೂ ತಮ್ಮ ಮನೆಯ ಕೆಲಸ ಎಂದುಕೊಂಡೆ ಇಲ್ಲಿ ಹನುಮಪ್ಪನ ಸೇವೆ ಮಾಡುತ್ತಾ ಬಂದಿದ್ದಾರೆ.
ಉತ್ಸವದ ನಂತರ ಸಂಜೆ ಎಲ್ಲಾ ದೇವರುಗಳ ಸಮ್ಮುಖದಲ್ಲಿ ಭೂತ ಸೇವೆಯ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಏ. 4 & 5 ಕ್ಕೆ ಅಮ್ಮನ ಹಬ್ಬ : 9 ವರ್ಷಗಳ ನಂತರ ಗ್ರಾಮದಲ್ಲಿ ಇದೇ ದಿನಾಂಕ 4 ಮತ್ತು 5 ರಂದು ಗ್ರಾಮದೇವತೆ ಶ್ರೀ ದುರ್ಗಾಂಬಿಕ ದೇವಿ ಹಬ್ಬವನ್ನು ಗ್ರಾಮಸ್ಥರು ಬಹಳ ಅದ್ಧೂರಿಯಾಗಿ ಹಮ್ಮಿಕೊಂಡಿದ್ದಾರೆ.