ಹರಪನಹಳ್ಳಿ, ಏ. 2- ಬಡ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಕೈಲಾದಷ್ಟು ಆರ್ಥಿಕ ಸಹಾಯವನ್ನೂ ನೀಡುತ್ತಾ ಪರಿಸರ ಜಾಗೃತಿ, ಭಾವೈಕ್ಯತೆ ಮೂಡಿಸುವ ಜಾನಪದ ನೃತ್ಯ, ಸುಗ್ಗಿ ನೃತ್ಯ, ಭಾವಗೀತೆ ಕಲಿಸಿಕೊಡುತ್ತಿ ರುವ ದಿಟ್ಟ ಮಹಿಳೆ ಹೊಸದುರ್ಗದ ಶಿಕ್ಷಕಿ ಶಬೀನಾಬಾನು ಎಂದು ಹಿರಿಯ ರಂಗ ನಿರ್ದೇಶಕ ಪರಶುರಾಮ ಹೇಳಿದರು.
ಪಟ್ಟಣದ ಆದರ್ಶ ಮಹಿಳಾ ಮಂಡಳಿಯ ಕಲಾ ತಂಡದಲ್ಲಿ ಸಂಗೀತ ಸಂಯೋಜನೆಯ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರೈಮರಿ ಶಾಲೆಯಲ್ಲಿ ಓದುತ್ತಿರುವಾಗಲೇ ಹೊಸದುರ್ಗದ ಗಂಗಮ್ಮ ಮತ್ತು ಈಶ್ವರಪ್ಪ ಇವರಲ್ಲಿ ಕರ್ನಾಟಕ ಸಂಗೀತ ಕಲಿತಿರುವ ಶಬೀನಾಬಾನು ತನ್ನ ತಂದೆಯ ಹೆಸರಿನಲ್ಲಿ ರೆಹಮಾನಿಯಾ ಸಾಂಸ್ಕೃತಿಕ ಕಲಾ ಸಂಘ ಕಟ್ಟಿಕೊಂಡು ಎರಡು ದಶಕಗಳಿಂದ ಕರುನಾಡಿನ ಮುಕ್ಕಾಲು ಜಿಲ್ಲೆಗಳಲ್ಲಿ ಉತ್ತಮ ಪ್ರದರ್ಶನ ಕೊಟ್ಟು ಹೆಸರು ಪಡೆದಿದ್ದಾರೆ.
ಇವರ ಪರಿಶ್ರಮಕ್ಕೆ `ಬಸವಶಾಂತಿ’ ಪ್ರಶಸ್ತಿ ಬಿಜಾಪುರ, ಸದ್ಭಾವನಾ ಪ್ರಶಸ್ತಿ, ಜವಾಹರಲಾಲ್ ನೆಹರು ಪ್ರಶಸ್ತಿ ಬೆಂಗಳೂರು, ರಾಜ್ಯ ಮಹಿಳಾ ಪ್ರಶಸ್ತಿ ಚಿತ್ರದುರ್ಗ, ಕನ್ನಡತಿ ಗಾರುಡಿ ಪ್ರಶಸ್ತಿ ಶಿವಮೊಗ್ಗ, ಸಾಲು ಮರದ ತಿಮ್ಮಕ್ಕ ಪ್ರಶಸ್ತಿ ಚಳ್ಳಕೆರೆ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ದುರ್ಗದ ಸಿರಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿರುವರು. ಈಗ ಗವಿರಂಗನಾಥ ಸ್ವಾಮಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಾ ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ಬಡಮಕ್ಕಳಿಗೆ ಉಚಿತ ತರಬೇತಿ ಕೊಡುತ್ತಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಮಾತನಾಡಿ, ಶಬಿನಾರವರ ಕಂಠಸಿರಿ ಕೇಳುಗರಿಗೆ ಇಂಪು ಕೊಡುವುದು, ಸ್ಪಷ್ಟ ನಿಷ್ಕಲ್ಮಶದ ನುಡಿಗಳಿಂದ ರಾಗಕ್ಕೆ ಸಂಯೋಜನೆ ಮಾಡಿದ್ದನ್ನು ಸ್ಮರಿಸಿದರು. ಈ ವೇಳೆ ಆನಂದ, ಗಗನ, ಶಿಲ್ಪಾ, ಗುಡ್ಡಪ್ಪ, ಕುಮಾರ, ಧರ್ಮರಾಯ, ಚೌಡಮ್ಮ, ತೆಲಗಿ ಗಾಯತ್ರಿ, ಸವಿತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.