ಹರಪನಹಳ್ಳಿಯ 50 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುದಾನ ಕಲ್ಪಿಸಿದ್ದು ಕಾಂಗ್ರೆಸ್‌ ಸರ್ಕಾರ

ಹರಪನಹಳ್ಳಿಯ 50 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುದಾನ ಕಲ್ಪಿಸಿದ್ದು ಕಾಂಗ್ರೆಸ್‌ ಸರ್ಕಾರ

ಹರಪನಹಳ್ಳಿ,ಮಾ.27- ತಾಲ್ಲೂಕಿನ 50 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ದಿ. ಎಂ.ಪಿ. ರವೀಂದ್ರ ಅವರ ಅವಧಿಯಲ್ಲಿ ಸಿದ್ಧರಾಮಯ್ಯನವರ ಸರ್ಕಾರವು  ಅನುದಾನ ಕಲ್ಪಿಸಿರುವ ಬಗ್ಗೆ ನಮ್ಮ ಬಳಿ ದಾಖಲೆ ಇವೆ. ಶಾಸಕ ಜಿ. ಕರುಣಾಕರ ರೆಡ್ಡಿ ಅವರು ಈ ಯೋಜನೆಗೆ ಅನುದಾನ ತಂದಿದ್ದಾರೆ ಎನ್ನುವುದಾದರೆ, ಮಾಧ್ಯಮದವರ ಮುಂದೆ ದಾಖಲೆ ಸಮೇತ ಬಹಿರಂಗಪಡಿಸಲಿ ಎಂದು ಕೆಪಿಸಿಸಿ ವಕ್ತಾರ  ಡಿ. ಬಸವರಾಜ್‌ ಸವಾಲು ಹಾಕಿದರು.

ಪಟ್ಟಣದ ಕೊಟ್ಟೂರು ಬೈಪಾಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಛೇರಿಯಲ್ಲಿ ಇಂದು ಜರುಗಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಹಾಲಿ ಶಾಸಕರು ತಾಲ್ಲೂಕಿನ 50 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದ್ದು, ಈ ಯೋಜನೆ ನಮ್ಮ ಅವಧಿಯಲ್ಲಿ ಆಗಿದೆ ಎಂದು ಜನರಿಗೆ ದಿಕ್ಕು ತಪ್ಪಿಸುತ್ತಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಜಾತಿ ಆಧಾರದ ಮೇಲೆ ನೀಡುತ್ತಿರುವ ಮೀಸಲಾತಿ ವರ್ಗೀಕರಣ ಸಂಪೂರ್ಣ ಅವೈಜ್ಞಾನಿಕವಾಗಿದೆ. ಪರಿಶಿಷ್ಟ ಸಮುದಾಯದವರೆಲ್ಲ ಸಹೋದರರಂತೆ ಬದುಕುತ್ತಿದ್ದೇವೆ. ಆದರೆ ಬಿಜೆಪಿ ಸರ್ಕಾರ ನಮ್ಮನ್ನು ಬೇರ್ಪಡಿಸಿ, ಸದಾಶಿವ ಆಯೋಗವನ್ನು ಸರಿಯಾಗಿ ಸದನದಲ್ಲಿ ಚರ್ಚೆ ಮಾಡದೆ ಜಾರಿಗೆ ತರಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮುಸ್ಲಿಂ ಸಮುದಾಯಕ್ಕಿದ್ದ 2 ಬಿ ಮೀಸಲಾತಿಯಲ್ಲಿ ಶೇ. 4ರಷ್ಟನ್ನು ವಾಪಸ್ಸು ಪಡೆದು ಇತರೆ ಸಮುದಾಯಕ್ಕೆ ನೀಡುತ್ತಿರುವುದು ಯಾವ ನ್ಯಾಯ,  ಅವರೂ ಸಹ ನಮ್ಮ ಭಾರತದ ಪ್ರಜೆಗಳು. ಅವರಿಗೂ ಮೀಸಲಾತಿ ಅಗತ್ಯವಿದೆ. ತಕ್ಷಣ ಈ ಗೊಂದಲದ ಮೀಸಲಾತಿಯನ್ನು ಬಿಜೆಪಿ ಸರ್ಕಾರ ವಾಪಸ್‌ ಪಡೆಯಬೇಕು. ಒಂದು ವೇಳೆ ಸರ್ಕಾರ ಮೀಸಲಾತಿ ವರ್ಗಿಕರಣ ವಾಪಸ್‌ ಪಡೆಯದಿದ್ದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಈ ಮೀಸಲಾತಿ ಬಗ್ಗೆ ಸಮಗ್ರವಾಗಿ ಚರ್ಚಿಸಿ, ಅದನ್ನು ಅನುಷ್ಟಾನಕ್ಕೆ ತರಲು ಪ್ರಯತ್ನಿಸಲಾಗುವುದು ಎಂದರು.

ಕಾಂಗ್ರೆಸ್ ಪಕ್ಷ ಹರಪನಹಳ್ಳಿಯಲ್ಲಿ ಯಾರಿಗೇ ಟಿಕೆಟ್ ನೀಡಿದರು ಒಗ್ಗಟ್ಟಿನಿಂದ ಅವರ ಗೆಲುವಿಗೆ ಶ್ರಮಿಸುತ್ತೇವೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ಹರಪನಹಳ್ಳಿಯಲ್ಲೂ ಸಹ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಎಂ.ವಿ. ಅಂಜಿನಪ್ಪ, ಟಿ. ವೆಂಕಟೇಶ, ಗೊಂಗಡಿ ನಾಗರಾಜ, ಲಾಟಿ ದಾದಾಪೀರ್‌, ಗಣೇಶ್‌, ಮುಖಂಡರಾದ ಚಿಕ್ಕೇರಿ ಬಸಪ್ಪ, ಎಚ್.ವಸಂತಪ್ಪ, ಫಾರೂಕ್ ಸಾಬ್, ಅನೀಸ್‌ ಸಾಬ್, ಎಲ್.ಎಂ.ಮಂಜ್ಯಾನಾಯ್ಕ, ಶಿವರಾಜ, ಎಚ್.ಬಾಲಾಜಿ, ಜಿಷಾನ್, ಗೋಣೆಪ್ಪ, ಶಂಕರ್ ಸೇರಿದಂತೆ ಇತರರು ಇದ್ದರು.

error: Content is protected !!