ಫಲಾನುಭವಿಗಳ ಆಯ್ಕೆ ಏಕಪಕ್ಷೀಯ

ಫಲಾನುಭವಿಗಳ ಆಯ್ಕೆ ಏಕಪಕ್ಷೀಯ

ಹಟ್ಟಿ, ತಾಂಡ, ಕ್ಯಾಂಪ್‍ಗಳಲ್ಲಿನ ಜನರಿಗೆ ಹಕ್ಕುಪತ್ರ ವಿತರಣೆ

ದಾವಣಗೆರೆ, ಮಾ.27- ಹಟ್ಟಿ, ತಾಂಡಾ ಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ನಾವು ಒಪ್ಪಿಗೆ ನೀಡಿದ್ದರೂ, ಅಧಿಕಾರಿಗಳು ನಮ್ಮ ಗಮನಕ್ಕೆ ತಾರದೇ ಏಕಪಕ್ಷೀಯ ನಿರ್ಧಾರ ಕೈಗೊಂಡು ಫಲಾನುಭವಿಗಳನ್ನು ಆಯ್ಕೆ ಮಾಡಿದ್ದಾರೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ  ಶಾಮನೂರು ಶಿವಶಂಕರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಹಟ್ಟಿ, ತಾಂಡಾ, ಕ್ಯಾಂಪ್‍ಗಳಲ್ಲಿ ಹಲವು ವರ್ಷಗಳಿಂದ ವಾಸವಾಗಿರುವ ಜನರಿಗೆ ಸೋಮವಾರ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮ  ಉದ್ಘಾಟಿಸಿ ಅವರು ಮಾತನಾಡಿದರು.

ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಕಾಗೋಡು ತಿಮ್ಮಪ್ಪನವರು ಕಂದಾಯ ಸಚಿವರಾಗಿದ್ದಾಗ ಸರ್ಕಾರಿ ಮತ್ತು ಖಾಸಗಿ ನಿವೇಶನಗಳಲ್ಲಿ ವಾಸಿಸುವವರಿಗೆ `ಇರುವವನೇ ಭೂಮಿ ಒಡೆಯ’ ಎಂಬ ಯೋಜನೆ ಜಾರಿಗೆ ತರಲಾಗಿತ್ತು. ಈ ಯೋಜನೆಯಡಿ ಅರ್ಹರನ್ನು ಗುರುತಿಸಿ, ನಿವೇಶನದ ಹಕ್ಕು ನೀಡಲಾಗುತ್ತಿದೆ. ನಮ್ಮ ಕ್ಷೇತ್ರದಲ್ಲೇ ಸಾವಿರಾರು ಬಡವರು ನಿವೇಶನ ಇಲ್ಲದೇ ಮನವಿ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.

ಸೂರು ಇಲ್ಲದವರಿಗೆ ಸೂರು ಕಲ್ಪಿಸು ವುದು ಸರ್ಕಾರದ ಕರ್ತವ್ಯವಾಗಿದ್ದು, ಅಧಿ ಕಾರಿಗಳು ಸೂರು ಇಲ್ಲದವರನ್ನು ಗುರುತಿ ಸಬೇಕು. ಜನಪ್ರತಿನಿಧಿಗಳ ಗಮನಕ್ಕೆ ತಂದು  ಫಲಾನುಭವಿಗಳನ್ನು ಆಯ್ಕೆ ಮಾಡಬೇಕೆಂದು ಸೂಚ್ಯವಾಗಿ ತಿಳಿಸಿದರು.

ಶಾಸಕ ಎಸ್.ಎ.ರವೀಂದ್ರನಾಥ್, ಸಂಸದ ಜಿ.ಎಂ.ಸಿದ್ದೇಶ್ವರ್, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಡಿಡಿಎಲ್ ಆರ್ ಭಾವನಾ ಅವರುಗಳು ಮಾತನಾಡಿ ಹಕ್ಕುಪತ್ರ ತೆಗೆದುಕೊಂಡವರು ಯಾರಿಗೂ ಸಹ ಪರಭಾರೆ ಮಾಡದೇ ಸರ್ಕಾರದ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಲೋಕೇಶ್, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕೊಟೂರು ಬಸವನಗೌಡ, ಎಡಿಎಲ್‍ಆರ್ ನಾಗಭೂಷಣ್ ಮತ್ತಿತರರಿದ್ದರು.

ವಿರೇಶ್ವರ ಪುಣ್ಯಾಶ್ರಮದ ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಎಂ.ಬಿ.ಅಶ್ವಥ್ ಅವರು ಸ್ವಾಗತಿಸಿದರು. ಹಿರೇಗೌಡರು ವಂದಿಸಿದರು. 

error: Content is protected !!