ವೈದ್ಯರಿಗೆ ಉತ್ತಮ ಚಿಕಿತ್ಸಾ ಕೌಶಲ್ಯ ಮುಖ್ಯ : ಡಾ. ವಿ.ರವಿ

ವೈದ್ಯರಿಗೆ ಉತ್ತಮ ಚಿಕಿತ್ಸಾ ಕೌಶಲ್ಯ ಮುಖ್ಯ : ಡಾ. ವಿ.ರವಿ

ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ 12ನೇ ಪದವಿ ಪ್ರದಾನ ಸಮಾರಂಭ

ದಾವಣಗೆರೆ, ಮಾ. 27- ವೈದ್ಯರಿಗೆ ರೋಗಿಗಳ ಬಗ್ಗೆ  ವಿಶೇಷವಾದ ಸಹಾನುಭೂತಿ, ಉತ್ತಮ ಚಿಕಿತ್ಸಾ ಕೌಶಲ್ಯ ಮತ್ತು ಹೊಣೆಗಾರಿಕೆ ಇಲ್ಲದೇ ಹೋದರೆ ವೈದ್ಯ ವೃತ್ತಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಬೆಂಗಳೂರು ನಿಮ್ಹಾನ್ಸ್ ವಿಶ್ರಾಂತ ಹಿರಿಯ ಪ್ರಾಧ್ಯಾಪಕರೂ, ನ್ಯೂರೋ ವೈರಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ವಿ. ರವಿ ಹೇಳಿದರು.

ನಗರದ ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಮಹಾವಿದ್ಯಾಲಯದ `ಜ್ಞಾನ ಶಂಕರ’ದ ಆವರಣದಲ್ಲಿ ಹಮ್ಮಿಕೊಂಡಿ ದ್ದ 12 ನೇ ಪದವಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕೋವಿಡ್ ಸಾಂಕ್ರಾಮಿಕ ವೈದ್ಯಕೀಯ ಶಿಕ್ಷಕರು ಮತ್ತು ವೈದ್ಯ ಸಿಬ್ಬಂದಿಗೆ ಹೊಸ ಪಾಠ ಕಲಿಸಿತು. ಪ್ರಾಥಮಿಕ ಹಂತದಲ್ಲಿಯೇ ಅದನ್ನು ತಡೆಗಟ್ಟುವ ಚಿಕಿತ್ಸಾ ವಿಧಾನವೇ ತುಂಬಾ ಕ್ಲಿಷ್ಟಕರವಾಗಿತ್ತು ಎಂದರು.

ಕೇವಲ ಎರಡು ಡೋಸ್ ಲಸಿಕೆ ನೀಡಿದ್ದರಿಂದಲೇ ಶೇ. 93 ರಷ್ಟು ಜನರು ಪ್ರಾಣಾಪಾಯದಿಂದ ಪಾರಾದರು. ಕೋವಿಡ್ ತಡೆಗಟ್ಟುವಲ್ಲಿ ಅನುಸರಿಸಿದ ಕ್ರಮಗಳು ಹೆಚ್ಚು ಸಹಕಾರಿಯಾದವು ಎಂದು ಹೇಳಿದರು.

ವೈದ್ಯಕೀಯ ವ್ಯಾಸಂಗದಲ್ಲಿ ಟಾಪರ್ ಆಗಿ ಹೊರಹೊಮ್ಮಿ ಉನ್ನತ ಹುದ್ದೆಯನ್ನು ಅಲಂಕರಿಸಿರುವ ಕೆಲವು ವೈದ್ಯರಿಗೆ ಚುಚ್ಚುಮದ್ದು ನೀಡುವ ವಿಧಾನದ ಅರಿವಿಲ್ಲ. ಕಾಯಿಲೆ ಪತ್ತೆ ಅದನ್ನು ನಿವಾರಣೆ ಮಾಡುವ ಮುನ್ನ ರೋಗಿಗಳೊಂದಿಗೆ ಒಳ್ಳೆಯ ಸಂವಹನ ಮಾಡಿ, ಸ್ಪರ್ಶಿಸಿದರೆ ಸಾಕು ಅರ್ಧ ಕಾಯಿಲೆಗಳು ವಾಸಿಯಾಗಲಿವೆ ಎಂದರು.

ವೈದ್ಯಕೀಯ ಮಹಾವಿದ್ಯಾಲಯದಿಂದ ಪದವಿ ಪಡೆದು ಹೊರ ಬರುವ ವಿದ್ಯಾರ್ಥಿಗಳು ಉತ್ತಮ ವೈದ್ಯರಾಗುವುದಷ್ಟೇ ಮುಖ್ಯ. ವೈದ್ಯಕೀಯ ರಂಗದಲ್ಲಿ ಪ್ರಶ್ನಿಸುವ ಮನೋಭಾವ ಮತ್ತು ಹೊಣೆಗಾರಿಕೆ ಮರೆತರೆ ವೈದ್ಯರು ಎತ್ತರಕ್ಕೆ ಬೆಳೆಯಲು ಅಸಾಧ್ಯ ಎಂದು ತಿಳಿಸಿದರು.

ಇದೇ ವೇಳೆ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.

ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಿದ್ದರು.

ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲರಾದ ಡಾ. ಬಿ.ಎಸ್. ಪ್ರಸಾದ್, ನಿರ್ದೇಶಕರಾದ ಡಾ. ಅರುಣ್ ಕುಮಾರ್ ಅಜ್ಜಪ್ಪ, ರಾಜೀವ್ ಗಾಂಧಿ ವೈದ್ಯಕೀಯ ವಿವಿಯ ಸೆನೆಟ್ ಸದಸ್ಯ ಡಾ. ರವೀಂದ್ರ ಬಣಕಾರ್, ಪೆಥಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಶಶಿಕಲಾ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಸ್ನೇಹ ಮತ್ತು ಯಮುನಾ ಪ್ರಾರ್ಥಿಸಿದರು. ಡಾ.ಬಿ.ಎಸ್. ಪ್ರಸಾದ್ ಸ್ವಾಗತಿಸಿದರು. ಜಿ.ಎಸ್. ಲತಾ ಮತ್ತು ಆಶಾ ಕಾರ್ಯಕ್ರಮ ನಿರೂಪಿಸಿದರು. 

error: Content is protected !!