ಇಂದು ಮೋದಿ ಮಹಾಸಂಗಮ

ಇಂದು ಮೋದಿ ಮಹಾಸಂಗಮ

ಸಮಾವೇಶವನ್ನು ಚುನಾವಣಾ ದಿಕ್ಸೂಚಿ ಮಾಡಲು ಕೇಸರಿ ಪಡೆ ಸಜ್ಜು

ನಗರದ ಜಿ.ಎಂ.ಐ.ಟಿ. ಕಾಲೇಜಿನ ಪಕ್ಕದ 400 ಎಕರೆ ಪ್ರದೇಶದಲ್ಲಿ ನಡೆಯಲಿರುವ ಬಿಜೆಪಿಯ ಮಹಾಸಂಗಮ ಅಧಿವೇಶನವನ್ನು ನಭೂತೋ ಎಂಬ ರೀತಿಯಲ್ಲಿ ನಡೆಸಲು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

ಮಧ್ಯಾಹ್ನ 1.30ಕ್ಕೆ ವೇದಿಕೆ ಕಾರ್ಯಕ್ರಮಗಳು ಆರಂಭವಾಗಲಿದ್ದು, ನಂತರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಾರ್ಯಕ್ರಮದಲ್ಲಿ ಸೇರಿಕೊಳ್ಳಲಿದ್ದಾರೆ.

600 ಅಡಿ ಅಗಲ ಹಾಗೂ ಸಾವಿರ ಅಡಿ ಉದ್ದದ ವಿಶಾಲವಾದ ಶಾಮಿಯಾನ ಹಾಗೂ ಮೂರು ವೇದಿಕೆಗಳನ್ನು ಅಳವಡಿಸಲಾಗಿದೆ. ಈ ಶಾಮಿಯಾನ ಒಳಗೆ ಪ್ರಧಾನ ಮಂತ್ರಿ ರೋಡ್‌ ಷೋ ನಡೆಸುವುದು ವಿಶೇಷವಾಗಿರಲಿದೆ.

ಲಕ್ಷಾಂತರ ಜನರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಅವರು ಹತ್ತಿರದಿಂದ ಪ್ರಧಾನಿ ಮೋದಿ ನೋಡಲು ಅನುಕೂಲವಾಗುವ ರೀತಿಯಲ್ಲಿ ರೋಡ್‌ ಷೋ ಆಯೋಜಿಸಲಾಗಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸಮಾವೇಶದ ಪೆಂಡಾಲ್ ಒಳಗೆ ರೋಡ್‌ ಷೋ ನಡೆಸಲಾಗುತ್ತಿದೆ.

ತೆರೆದ ವಾಹನದಲ್ಲಿ ಮೋದಿ ರೋಡ್‌ ಷೋ ನಡೆಸಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಮಿಯಾನದಲ್ಲಿ ಸುಮಾರು ಅರ್ಧ ಕಿ.ಮೀ. ಉದ್ದಕ್ಕೆ ರೋಡ್‌ ಷೋ ನಡೆಯಲಿದೆ.

ಕಾರ್ಯಕ್ರಮದ ವೇದಿಕೆಯಲ್ಲಿ 2.5 ಲಕ್ಷ ಕುರ್ಚಿಗಳನ್ನು ಅಳವಡಿಸಲಾಗಿದೆ. ಸುತ್ತಲೂ 50 ಬೃಹತ್ ಎಲ್‌ಇಡಿ ತೆರೆಗಳನ್ನು ಅಳವಡಿಸಿ ಕಾರ್ಯಕ್ರಮದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಕಾರ್ಯಕ್ರಮಕ್ಕಾಗಿ ಸಾವಿರದಷ್ಟು ಸಂಚಾರಿ ಶೌಚಾಲಯಗಳನ್ನು ಅಳವಡಿಸಲಾಗಿದೆ.

300 ಕೌಂಟರ್‌ಗಳ ಮೂಲಕ ಆಹಾರ ವಿತರಣೆ ವ್ಯವಸ್ಥೆ ಮಾಡಲಾಗಿದೆ. ಜಿಎಂಐಟಿ ಆವರಣದಲ್ಲಿ ತಾತ್ಕಾಲಿಕ ಆಸ್ಪತ್ರೆ ತೆರೆಯಲಾಗಿದ್ದರೆ, ನಗರದ ಸಿ.ಜಿ. ಆಸ್ಪತ್ರೆಯಲ್ಲಿ ಒಂದು ಬ್ಲಾಕ್ ಅನ್ನು ಸಮಾವೇಶ ಸಂಬಂಧ ಕಾಯ್ದಿರಿಸಲಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಮಾವೇಶ ರಾಜಕೀಯ ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವುದು ಬಿಜೆಪಿಯ ಗುರಿಯಾಗಿದೆ. ಪ್ರಧಾನಿ ಮೋದಿ ಭಾಗವಹಿಸಲಿರುವ ಈ ಬೃಹತ್ ಸಮಾವೇಶ, ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂಬ ನಿರೀಕ್ಷೆ ಪಕ್ಷದ ಮುಖಂಡರದ್ದಾಗಿದೆ.

ಈ ಹಿಂದೆ ನಗರದಲ್ಲಿ ನಡೆದ ಸಿದ್ದರಾಮಯ್ಯನವರ 75ನೇ ಜನ್ಮ ದಿನದ ಅಮೃತ ಮಹೋತ್ಸವ ರಾಜ್ಯದಲ್ಲಷ್ಟೇ ಅಲ್ಲದೇ ರಾಷ್ಟ್ರದಲ್ಲೇ ಸುದ್ದಿ ಮಾಡಿತ್ತು. ಸಮಾವೇಶದಿಂದ ಕಾಂಗ್ರೆಸ್‌ಗೆ ಸಾಕಷ್ಟು ಉತ್ಸಾಹವೂ ದೊರೆತಿತ್ತು. ಈ ಉತ್ಸವದ ಜೊತೆ ಬಿಜೆಪಿ ಸಮಾವೇಶವನ್ನು ಹೋಲಿಕೆ ಮಾಡಲಾಗದು ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಆದರೂ, ಬಿಜೆಪಿ ಬಲಿಷ್ಠವಾಗಿರುವ ಜಿಲ್ಲೆಯಲ್ಲಿ ಮೋದಿ ಸಮಾವೇಶವನ್ನು ನಭೂತೋ ಎಂಬಂತೆ ನಡೆಸುವುದು ಬಿಜೆಪಿ ಮುಖಂಡರ ಉದ್ದೇಶ ಎಂಬುದು ಕಂಡು ಬರುತ್ತಿದೆ.

error: Content is protected !!