ಪ್ರತಿಷ್ಠೆ, ಸ್ಥಾನಮಾನ, ಅಧಿಕಾರ ಲಾಲಸೆಗಾಗಿ ಕನ್ನಡ-ಕರ್ನಾಟಕವನ್ನು ಬಳಸಿಕೊಳ್ಳಬೇಡಿ

ಪ್ರತಿಷ್ಠೆ, ಸ್ಥಾನಮಾನ, ಅಧಿಕಾರ ಲಾಲಸೆಗಾಗಿ ಕನ್ನಡ-ಕರ್ನಾಟಕವನ್ನು ಬಳಸಿಕೊಳ್ಳಬೇಡಿ

ಉಕ್ಕಡಗಾತ್ರಿ, ಮಾ.24- ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಗದ್ದಿಗೆ ಆವರಣದಲ್ಲೇ ಹರಿಹರ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನವು ಶುಕ್ರವಾರ ಯಶಸ್ವಿಯಾಗಿ ನಡೆಯಿತು.

ಬೆಳಿಗ್ಗೆ ಗ್ರಾಮದ ಬಯಲು ರಂಗ ಮಂದಿರದ ಆವರಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಕರಿಬಸಮ್ಮ ಅವರು ರಾಷ್ಟ್ರ ಧ್ವಜಾರೋಹಣ ಮತ್ತು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಅವರು ಕನ್ನಡ ಧ್ವಜಾರೋಹಣ ಹಾಗೂ ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಎಂ.ಮಂಜುನಾಥಯ್ಯ ಅವರು ಪರಿಷತ್ತಿನ ಧ್ವಜಾರೋಹಣ ನೆರವೇರಿಸಿ, ವಂದನೆ ಸ್ವೀಕರಿಸಿದರು.

ನಂತರ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಉಪತಹಶೀಲ್ದಾರ್ ಆರ್.ರವಿ ಚಾಲನೆ ನೀಡಿದರು.

ಸಮಾರಂಭ : ಮೆರವಣಿಗೆ ನಂತರ ಸ್ವಾತಂತ್ರ್ಯ ಯೋಧ ಗೋವಿನಹಾಳ್ ದಿ.ದಡ್ಡಿ ನಿಂಗನ ಗೌಡರ ವೇದಿಕೆಯಲ್ಲಿ  ಸಮ್ಮೇಳನವನ್ನು ಹಿರಿಯ ಸಾಹಿತಿ ಹಾವೇರಿಯ ಸತೀಶ್ ಕುಲಕರ್ಣಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಸತೀಶ್ ಕುಲಕರ್ಣಿ ಅವರು, ದಲಿತ ಸಂಘಟನೆ ಮತ್ತು ಬಂಡಾಯ ಸಾಹಿತ್ಯ ಸಂಘಟನೆ ಮೂಲಕ ನಾಡಿನ ಗಮನ ಸೆಳೆದಿರುವ ಹರಿಹರದಲ್ಲಿ ಕನ್ನಡ ಸಾಹಿತ್ಯ ಬಹಳ ವಿಶೇಷತೆ ಹೊಂದಿದೆ.

ಇಲ್ಲಿನ ಸಾಹಿತ್ಯಕ್ಕೆ ಪ್ರಗತಿಪರ ಸ್ಪರ್ಶ ಇದೆ. ಹಾಗಾಗಿಯೇ ಈ ಸಾಹಿತ್ಯ ಸಮ್ಮೇಳನಕ್ಕೆ ಗ್ರಾಮೀಣ ಪ್ರದೇಶದ ಕೃಷಿಕ ಹಾಗೂ ಸಾಹಿ ತ್ಯಿಕ, ಕೃಷಿಕರಾದ ಕಮಲಾಪುರದ ಷಣ್ಮುಖಪ್ಪ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ ಎಂಬುದು ನನ್ನ ಭಾವನೆ ಆಗಿದೆ.

ಷಟ್ಪದಿ ಎಂದರೆ ಇವತ್ತಿನ ಕವಿಗಳಿಗೆ ಗೊತ್ತಿಲ್ಲ. ಷಟ್ಪದಿ ಕಾವ್ಯ ಸಮುದ್ರದಷ್ಟು ಆಳವಾ ಗಿದೆ. ಒಬ್ಬ ಸಾಹಿತಿಗೆ ಮೂಲ ಸಾಹಿತ್ಯ ಗೊತ್ತಿ ದ್ದರೆ ಮಾತ್ರ ಉತ್ತಮ ಕಾವ್ಯ ಹೊರ ಬರಲು ಸಾಧ್ಯ ಎಂದು ಕುಲಕರ್ಣಿ ಹೇಳಿದರು. ಯಾವ ಪರಿಸರದಲ್ಲಿ ಜನಾಂದೋಲನ ಇರುತ್ತದೆಯೋ ಅಲ್ಲಿ ಹೊಸ ಚಿಂತನೆ ಇರುತ್ತದೆ ಎಂದರು.

ಜಾಗತೀಕರಣ ಮತ್ತು ಕೋಮುವಾದದ ಜೊತೆಯಲ್ಲಿ ಕುಂದುತ್ತಿರುವ ನಾವು ಜಾಗೃತ ರಾಗಬೇಕಿದೆ. ಉತ್ತರ ಕೊಡುವವರಿಗಿಂತ ಪ್ರಶ್ನೆ ಕೇಳುವವರು ಹೆಚ್ಚಾಗಿದ್ದಾರೆ. ಕನ್ನಡದ ವರದಿಗಳು ಧೂಳು ಹಿಡಿದಿವೆ. ಅನುಷ್ಠಾನ ಆಗಿರುವ ವರದಿಗಳು ಒಂದೆರಡು ಮಾತ್ರ ಎಂದ ಸತೀಶ್ ಕುಲಕರ್ಣಿ ಅವರು, ಕಾವ್ಯದ ಜೊತೆಗೆ ಅನುಸಂಧಾನ ಆಗಬೇಕು. ಸಾಕಷ್ಟು ಬೆಳೆದಿರುವ ಮಾಹಿತಿ ತಂತ್ರಜ್ಞಾನದ ಮೂಲಕ ಕನ್ನಡವನ್ನು ಮತ್ತಷ್ಟು ಬಲಗೊಳಿಸಬೇಕು. ಇಂಗ್ಲಿಷ್ ನಮಗೆ ಬೆಳಕಾಗಬೇಕೇ ಹೊರೆತು ಬೆಂಕಿಯಾಗಬಾರದು. ಜನರ ನಿರೀಕ್ಷೆ ಹೊಂದಿರುವ ಕಸಾಪ ಇತ್ತೀಚಿನ ಧೋರಣೆ ಗಳಿಂದ ಹೊರಬರಬೇಕೆಂದು ಆಗ್ರಹಿಸಿದರು.

ಮಾಜಿ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಬೆಂಗಳೂರಿನಲ್ಲಿ ಕನ್ನಡ ಮಾತನಾಡಲು ಬಂದರೂ ಇಂಗ್ಲಿಷ್‌ನಲ್ಲೇ ಮಾತನಾಡುವ ಶೋಕಿ ಬೆಳೆಸಿಕೊಂಡಿದ್ದಾರೆ. ಕನ್ನಡ ನಾಡಿನಲ್ಲಿ ಪ್ರತಿಯೊಬ್ಬರೂ ಕನ್ನಡದಲ್ಲಿ ಕಡ್ಡಾಯವಾಗಿ ಮಾತನಾಡುವಂತಹ ಆದೇಶ ಜಾರಿಯಾಗಬೇಕೆಂದರು.

ಬಿಜೆಪಿ ಯುವ ಮುಖಂಡ ಚಂದ್ರಶೇಖರ್ ಪೂಜಾರ್ ಮಾತನಾಡಿ, ಸಾಹಿತ್ಯಕ್ಕೆ ಶಕ್ತಿ, ಭಕ್ತಿ ಎರಡೂ ಇದೆ. ಸಾಹಿತ್ಯವನ್ನು ಓದಿದವರ ಮನಸ್ಸು ಕೆಟ್ಟ ಆಲೋಚನೆ ಹೊಂದಿರುವುದಿಲ್ಲ. ಸಮ್ಮೇಳನದ ಸಂಖ್ಯೆಗಿಂತ, ಜನರಿಗೆ ಸಾಹಿತ್ಯದ ಬಗ್ಗೆ ಅಭಿರುಚಿ, ಅರಿವು ಮೂಡಿಸುವುದು ಮುಖ್ಯ ಎಂದರು.

ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಕನ್ನಡ ಸಮ್ಮೇಳನ ಗಳಿಂದ ಜನರಿಗೆ ಹೊಸ ಹೊಸ ವಿಷಯ ಇತಿಹಾಸದ ಪರಿಚಯವೂ ಆಗುತ್ತದೆ ಎಂದರು.

ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೇ ಸ್ವತಂತ್ರವಾಗಿ ಕನ್ನಡ ಕಟ್ಟುವ ಕೆಲಸ ಮಾಡಬೇಕೆಂದರು.

ಆಶಯ ನುಡಿಗಳನ್ನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಅವರು, ಸಾಹಿತ್ಯ ಎಲ್ಲರ ಸ್ವತ್ತಾಗಿ ಬೆಳೆಯಬೇಕು. ಜಾನಪದ ಸಾಹಿತ್ಯದಿಂದ ಹಿಡಿದು ಅಕ್ಷರ ಸಾಹಿತ್ಯದವರೆಗೆ ಎಲ್ಲಾ ಸಾಹಿತ್ಯವನ್ನು ಬಲಪಡಿಸಬೇಕು. ಈ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನಗಳು ಪೂರಕವಾಗಿ ಕೆಲಸ ಮಾಡುತ್ತಿವೆ. ಹರಿಹರ ತಾಲ್ಲೂಕಿನಲ್ಲಿ ಇದುವರೆಗೂ 3 ಸಮ್ಮೇಳನಗಳು ಮಾತ್ರ ನಡೆದಿದ್ದು, ಇದಕ್ಕೆ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದರು.

ಸಮ್ಮೇಳನಾಧ್ಯಕ್ಷ ಕಮಲಾಪುರದ ಬಿ.ಷಣ್ಮುಖಪ್ಪ ಮಾತನಾಡಿ, ಪ್ರತಿಷ್ಠೆ, ಸ್ಥಾನಮಾನ, ಅಧಿಕಾರದ ಲಾಲಸೆಗೆ ಕನ್ನಡ-ಕರ್ನಾಟಕವನ್ನು ಬಳಸಿಕೊಳ್ಳಬೇಡಿ. ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕು. ಪರಭಾಷೆಯೇ ಸರ್ವಸ್ವ ಎಂಬ ಪೋಷಕರ ಅಭಿಪ್ರಾಯ ತಪ್ಪು. ನಾಗರಿಕತೆಯ ವೈಭವೀಕರಣಕ್ಕಿಂತ, ಸಾಂಸ್ಕೃತಿಕ ವೈಭವೀಕ ರಣ ಹೆಚ್ಚಾಗಲಿ. ಜಾತಿಯನ್ನು ಮೀರಿ ಮಾನವೀ ಯತೆಯ ನೀತಿ ಬೆಳೆಯಲಿ. ಪ್ರತಿಮನೆಯಲ್ಲೂ ಕನ್ನಡದ ಅಕ್ಷರ, ಕಾಗುಣಿತ, ಸಂವತ್ಸರ, ಋತುಗಳು, ವ್ಯಾಕರಣ ಕಲಿಸುವ ತುರ್ತು ಅನಿವಾರ್ಯತೆ ನಮ್ಮ ಮುಂದಿದೆ ಎಂದರು.

ಹಿರಿಯರಾದ ಸಿರಿಗೆರೆ ನಾಗನಗೌಡ್ರು, ಶ್ರೀ ಕರಿಬಸವೇಶ್ವರ ಗದ್ದುಗೆ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಎಸ್.ಸುರೇಶ್, ಬಿಇಓ ಎಂ.ಹನುಮಂತಪ್ಪ, ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನಾಧಿಕಾರಿ ವಸಂತ್ ದೇವಾಡಿಗ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಎ.ಆರ್.ಉಜ್ಜಿನಪ್ಪ, ಎಸ್.ಹೆಚ್.ಹೂಗಾರ್, ಡಾ. ಮಂಜುನಾಥ್ ಕುರ್ಕಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಬಿ.ದಿಳ್ಯೆಪ್ಪ, ರೇವಣಸಿದ್ದಪ್ಪ ಅಂಗಡಿ, ಸಂಘಟನಾ ಕಾರ್ಯದರ್ಶಿಗಳಾದ ಜಿಗಳಿ ಪ್ರಕಾಶ್, ಜಗದೀಶ್ ಕೂಲಂಬಿ, ಜಿಲ್ಲಾ ಕಸಾಪ ಸದಸ್ಯ ರಿಯಾಜ್ ಅಹಮದ್, ತಾ.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೆ.ಭೂಮೇಶ್, ಗೌರವಾಧ್ಯಕ್ಷ ಎಂ.ಉಮ್ಮಣ್ಣ, ತಾ.ಪ್ರಾ.ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಚಂದ್ರಪ್ಪ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಜಯಣ್ಣ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಈಶಪ್ಪ ಬೂದಿಹಾಳ್, ತಾ. ಕಸಾಪ ಗೌರವ ಕಾರ್ಯದರ್ಶಿ ಚಿದಾನಂದ್ ಕಂಚಿಕೇರಿ, ಮಲೇಬೆನ್ನೂರು ಹೋಬಳಿ ಕಸಾಪ ಅಧ್ಯಕ್ಷ ದಂಡಿ ತಿಪ್ಪೇಸ್ವಾಮಿ, ಕಾರ್ಯದರ್ಶಿ ಚಂದ್ರಶೇಖರ್, ಹೋರಾಟಗಾರ ಎಕ್ಕೆಗೊಂದಿ ರುದ್ರಗೌಡ, ಹಿರಿಯರಾದ ಪ್ರೊ. ಹೆಚ್.ಎ.ಭಿಕ್ಷಾವರ್ತಿಮಠ, ಪ್ರೊ. ಸಿ.ವಿ.ಪಾಟೀಲ್, ಡಾ. ಎ.ಬಿ.ರಾಮಚಂದ್ರಪ್ಪ, ಹೆಚ್.ಕೆ.ಕೊಟ್ರಪ್ಪ, ಜೆ.ಕಲೀಂ ಭಾಷಾ, ಎನ್.ಎಸ್.ರುದ್ರಗೌಡ, ಪಿಡಿಓ ರಾಮಚಂದ್ರಪ್ಪ, ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿ ಆನಂದ್ ತೀರ್ಥ ಹಾಗೂ ಇತರರು ಭಾಗವಹಿಸಿದ್ದರು.

ಹರಿಹರ ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಎಂ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧ್ಯಕ್ಷ ವಿಜಯ ಮಹಾಂತೇಶ್ ಸ್ವಾಗತಿಸಿದರು. ಎನ್.ಎಂ.ಶ್ರೀಧರಮೂರ್ತಿ ನಿರೂಪಿಸಿದರು. ಹೆಚ್.ಎಂ.ಸದಾನಂದ್ ವಂದಿಸಿದರು.

error: Content is protected !!