ಮಲೇಬೆನ್ನೂರು, ಮಾ. 15- ಇಲ್ಲಿನ 22 ನೇ ವಾರ್ಡ್‌ನಲ್ಲಿ ಮನೆ ಮನೆಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಿಸುವ ಕಾರ್ಯಕ್ರಮಕ್ಕೆ ಶಾಸಕ ಎಸ್. ರಾಮಪ್ಪ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ರಾಮಪ್ಪ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮಿ ಯೋಜನೆಯ ಅನ್ವಯ ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರೂ. ಹಾಗೂ ಗೃಹಜ್ಯೋತಿ ಕಾರ್ಯಕ್ರಮದಡಿ ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ಮತ್ತು ಪ್ರತಿ ತಿಂಗಳಿಗೆ 10 ಕೆ.ಜಿ. ಅಕ್ಕಿಯನ್ನು ಅನ್ನಭಾಗ್ಯ ಯೋಜನೆಯಡಿ ನೀಡುತ್ತೇವೆ. ಅದರ ಗ್ಯಾರಂಟಿ ಕಾರ್ಡ್‌ಗಳನ್ನು ರಾಜ್ಯದ ಪ್ರತಿ ಮನೆಗೂ ವಿತರಿಸುವ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷ ಈಗಾಗಲೇ ಆರಂಭಿಸಿದ್ದು, ನಾವೂ ಸಹ ಹರಿಹರ ಕ್ಷೇತ್ರದಲ್ಲಿ ಕಾರ್ಡ್ ವಿತರಣೆಗೆ ಚಾಲನೆ ನೀಡಿದ್ದೇವೆ. ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷವಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸ್ಪಷ್ಟ ಸೂಚನೆ ಜನರಿಂದ ವ್ಯಕ್ತವಾಗುತ್ತಿದೆ ಎಂದು ರಾಮಪ್ಪ ಹೇಳಿದರು.
ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ಬಿ. ರೋಷನ್ ಸಾಬ್, ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬೀದ್ ಅಲಿ, ಪುರಸಭೆ ಸದಸ್ಯ ರಾದ ಷಾ ಅಬ್ರಾರ್, ಸಾಬೀರ್, ನಯಾಜ್, ಖಲೀಲ್, ದಾದಾಪೀರ್, ಎಂ.ಬಿ. ರುಸ್ತುಂ, ಚಮನ್ ಷಾ, ಕೆ.ಪಿ. ಗಂಗಾಧರ್, ಭೋವಿಕುಮಾರ್, ಮುಖಂಡರಾದ ಸೈಯದ್ ಜಾಕೀರ್, ಬಿ. ರಫೀಕ್ ಸಾಬ್, ಎಂ.ಬಿ. ಸಜ್ಜು, ಎ. ಆರೀಫ್ ಅಲಿ, ವರ್ತಕ ನಯಾಜ್, ಕೊಟ್ರೇಶನಾಯ್ಕ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.