ಸಕ್ಕರೆ ಕಾರ್ಖಾನೆ ಹಾರು ಬೂದಿಗೆ ಅಂಕುಶ

ಸಕ್ಕರೆ ಕಾರ್ಖಾನೆ ಹಾರು ಬೂದಿಗೆ ಅಂಕುಶ

ತ್ಯಾಜ್ಯ ನೀರು ಹಳ್ಳಕ್ಕೆ ಬಿಡದಂತೆ ಕ್ರಮ: ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಭರವಸೆ

ದಾವಣಗೆರೆ, ಮಾ. 13-  ಕುಕ್ಕುವಾಡ ಸಕ್ಕರೆ ಕಾರ್ಖಾನೆಯಿಂದ ಹೊರ ಸೂಸುವ ಹಾರು ಬೂದಿ, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಹಾಗೂ ಕಾರ್ಖಾನೆಯ ತ್ಯಾಜ್ಯ ನೀರನ್ನು ನೇರವಾಗಿ ಹಳ್ಳಕ್ಕೆ ಬಿಡದೆ, ಸಂಸ್ಕರಿಸಿ ಬಿಡಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದ್ದಾರೆ.

ಸೋಮವಾರ ಕುಕ್ಕುವಾಡದ ಕಾರ್ಖಾನೆ ಬಳಿ ರೈತರನ್ನುದ್ದೇಶಿಸಿ ಮಾತನಾಡಿದ ಅವರು, ನಿಮ್ಮ ಈ ಎರಡೂ ಬೇಡಿಕೆಗಳು ಅತಿ ಶೀಘ್ರದಲ್ಲಿಯೇ ಈಡೇರಲಿವೆ. ಉಳಿದ ಬೇಡಿಕೆಗಳ ಬಗ್ಗೆ ಸಕ್ಕರೆ ಆಯುಕ್ತರು, ರೈತರ ಸಭೆ ಕರೆದು ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.

ಕಾರ್ಖಾನೆಯಿಂದ ಹೊರ ಬರುವ ಹಾರು ಬೂದಿ ಹಾಗೂ ತ್ಯಾಜ್ಯ ನೀರಿನಿಂದ ಸುತ್ತಮುತ್ತಲಿನ ಗ್ರಾಮಗಳ ಜನರು, ಜಾನುವಾರುಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ರೈತ ಮುಖಂಡ ಕೊಳೇನಹಳ್ಳಿ ಸತೀಶ್ ನೇತೃತ್ವದಲ್ಲಿ ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ, ಕುಕ್ಕುವಾಡದ ಕಾರ್ಖಾನೆಯಲ್ಲಿಯೇ ಮಾಲೀಕರು ಹಾಗೂ ರೈತರೊಂದಿಗೆ ಸಭೆ ನಡೆಸುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆಗೆ ಸಭೆ ನಿಗದಿಯಾಗಿತ್ತು. ಸಭೆಗೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಎಸ್. ಗಣೇಶ್ ಆಗಮಿಸಿದ್ದರು. ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ರೈತರೂ ಸಹ ಆಗಮಿಸಿದ್ದರು. ಆದರೆ ಸಂಜೆ 4.15ರ ವೇಳೆಗೆ ಆಗಮಿಸಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹಾಗೂ ಎಸ್ಪಿ ಸಿ.ಬಿ. ರಿಷ್ಯಂತ್ ವ್ಯವಸ್ಥಾಪಕ ನಿರ್ದೇಶಕರ ಕಚೇರಿಗೆ ತೆರಳಿದ್ದು ಹಾಗೂ ರೈತರು ಗ್ರಾ.ಪಂ. ಕಚೇರಿಯಲ್ಲಿ ಇರುವಂತೆ ಹೇಳಿ ಕಳುಹಿಸಿದ್ದು ರೈತರನ್ನು ಕೆರಳಿಸಿತು.

ಜಿಲ್ಲಾಧಿಕಾರಿಗಳ ನಡೆಗೆ ಆಕ್ರೋಶಗೊಂಡ ರೈತರು ಗ್ರಾ.ಪಂ. ಕಚೇರಿ ಎದುರು ನಿಂತಿದ್ದ ಅವರ ಕಾರಿನ ಮುಂದೆ ಕುಳಿತು ಪ್ರತಿಭಟಿಸಿದರು.

ಈ ವೇಳೆ ರೈತರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ, ಕಾರ್ಖಾನೆಯ ಒಳಗಡೆ ಪರಿಶೀಲಿಸಿದ್ದೇನೆ. ಬೂದಿ ಹಾಗೂ ತ್ಯಾಜ್ಯದ ನೀರು ಬಿಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಆಗ ರೈತ ಮುಖಂಡ ಬಿ.ಎಂ. ಸತೀಶ್, ರೈತರು ಮತ್ತು ಕಾರ್ಖಾನೆಯವರ ಸಭೆಯನ್ನು ಕರೆದಿರುವುದಾಗಿ ಹೇಳಿ, ಈಗ ಕಾರ್ಖಾನೆ ಯವರೊಂದಿಗೆ ಪ್ರತ್ಯೇಕವಾಗಿ ಮಾತನಾಡಿಕೊಂಡು ಬಂದಿದ್ದು ಸರಿಯಲ್ಲ ಎಂದು ಆಕ್ರೋಶ ಹೊರ ಹಾಕಿದರು.

ನಿಮ್ಮ ಬೇಡಿಕೆಗಳನುಸಾರ ಕಾರ್ಖಾನೆ ಒಳಗೆ ತೆರಳಿ ಪರಿಶೀಲಿಸಿದ್ದೇನೆ. ಕಾರ್ಖಾನೆ ಚಿಮಣಿ ಮೂಲಕ ಹೊರ ಸೂಸುವ ಬೂದಿ ಹಾಗೂ ತ್ಯಾಜ್ಯ ನೀರಿನಿಂದ ಮಾಲಿನ್ಯವಾಗುತ್ತಿರುವುದು ನಿಜ. ಇದನ್ನು ನಿಯಂತ್ರಸುವ ಜವಾಬ್ದಾರಿ ನಮ್ಮದು. ಉಳಿದ ಬೇಡಿಕೆಗಳ ಬಗ್ಗೆ ಮತ್ತೊಂದು ಸಭೆ ಕರೆದು ಚರ್ಚಿಸುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಹದಡಿ ಹಾಲಪ್ಪ, ಗೌಡ್ರು ಷಣ್ಮುಖ, ಬಲ್ಲೂರು ಬಸವರಾಜಪ್ಪ, ಕುಕ್ಕುವಾಡದ ರುದ್ರೇಗೌಡ್ರು, ಬಲ್ಲೂರು ರವಿಕುಮಾರ್, ಕನಗೊಂಡನಹಳ್ಳಿ ವೈ.ಎನ್. ತಿಪ್ಪೇಸ್ವಾಮಿ, ಗಣೇಶ್, ಚನ್ನಪ್ಪ, ಪರಮೇಶ್ವರಪ್ಪ, ಮಂಜುನಾಥ್, ಎಸ್.ಕರಿಬಸಪ್ಪ, ಎಸ್ ನಿಂಗಪ್ಪ, ಕೊಳೇನಹಳ್ಳಿ ಕೆ.ಶರಣಪ್ಪ, ಕೆ.ಶಾಂತಪ್ಪ, ಅಮಟಿ ನಾಗರಾಜ್, ಸ್ವಾಮಿಲಿಂಗಪ್ಪ, ರೇಣುಕಾ, ವೀಣಾ, ನಾಗರಸನಹಳ್ಳಿ ರುದ್ರೇಶ್, ಚನ್ನಪ್ಪ, ಕುಬೇರಪ್ಪ, ಬಲ್ಲೂರು ವೀರಯ್ಯ, ಬಕ್ಕಯ್ಯ, ಶಿರನಹಳ್ಳಿ ನಾಗರಾಜ್, ದ್ಯಾಮಣ್ಣ, ಮಹೇಶರೆಡ್ಡಿ, ಜಡಗನಹಳ್ಳಿ ವೈ ಬಿ ನಿಂಗಪ್ಪ, ಎನ್.ಬಸವರಾಜ್, ಕೈದಾಳೆ ಗುರುಪ್ರಸಾದ್, ಹೊಸಹಳ್ಳಿ ಶಿವಮೂರ್ತಿ, ಆರನೇ ಕಲ್ಲು ವಿಜಯಕುಮಾರ್ ಮತ್ತಿತರರು ಇದ್ದರು.

error: Content is protected !!