ಬಸಾಪುರ : ಶಾಲಾ ಕೊಠಡಿಗಳ ಉದ್ಘಾಟನೆಯಲ್ಲಿ ಎಸ್ಸೆಸ್
ದಾವಣಗೆರೆ, ಮಾ.10- ನಗರವು ಮೊದಲ ಹಂತದಲ್ಲೇ ಸ್ಮಾರ್ಟ್‍ಸಿಟಿ ಯೋಜನೆಗೆ ಆಯ್ಕೆಯಾಗಲು ಕಾಂಗ್ರೆಸ್ ಪಕ್ಷದ ಆಡಳಿತವೇ ಕಾರಣ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು.
ಬಸಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಏರ್ಪಾಡಾಗಿದ್ದ ಶಾಲೆಯ ಕಟ್ಟಡದ ಅಭಿವೃದ್ಧಿ ಕಾಮಗಾರಿ ಮತ್ತು ಸರ್ಕಾರಿ ಪ್ರೌಢಶಾಲೆಯ ನವೀಕೃತ ಕಾಮಗಾರಿ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾನಗರ ಪಾಲಿಕೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ಇದ್ದುದರಿಂದ ದಾವಣಗೆರೆ ನಗರ ಮೊದಲ ಹಂತದಲ್ಲೇ ಸ್ಮಾರ್ಟ್‍ಸಿಟಿ ಯೋಜನೆಗೆ ಆಯ್ಕೆಯಾಯಿತು. ಈ ಹಿನ್ನೆಲೆಯಲ್ಲಿ ದಾವಣಗೆರೆ ದಕ್ಷಿಣದಲ್ಲಿ ಅನೇಕ ಅಭಿವೃದ್ಧಿ ಜೊತೆಗೆ ಶಾಲೆಗಳಿಗೆ ನೂತನ ಕೊಠಡಿಗಳನ್ನು ನಿರ್ಮಿಸಲಾಗಿದೆ ಎಂದರು.
ಪಾಲಿಕೆ ವ್ಯಾಪ್ತಿಯಲ್ಲಿ ದಾವಣಗೆರೆ ಸ್ಮಾರ್ಟ್‍ಸಿಟಿ ವತಿ ಯಿಂದ ಸರ್ಕಾರಿ ಶಾಲಾ ಕಟ್ಟಡಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಅಂದಾಜು ರೂ.4 ಕೋಟಿಗಳ ತೆಗೆದಿರಿಸಿ ಅದರಲ್ಲಿ ಇಂದು ಅಂದಾಜು ಮೊತ್ತ ರೂ. 80.87 ಲಕ್ಷಗಳ ಮೊತ್ತದಲ್ಲಿ ಬಸಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 6 ಕೊಠಡಿಗಳನ್ನು ಮತ್ತು ಶೌಚಾಲಯ 1 ಯೂನಿಟ್ ಹಾಗೂ ಅಂದಾಜು ಮೊತ್ತ ರೂ.13.78 ಲಕ್ಷಗಳ ಮೊತ್ತದಲ್ಲಿ ಬಸಾಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯನ್ನು ನವೀಕೃತಗೊಳಿಸಲಾಗಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯ ಬಾ.ಮ.ಬಸವರಾಜಯ್ಯ ಮಾತನಾಡಿ, ಈ ಶಾಲೆ 1957ರಲ್ಲಿ ಆರಂಭವಾಗಿದ್ದು, ಬಸಾಪುರದ ಅನೇಕರು ಅಭ್ಯಸಿರುವ ಶಾಲೆಯನ್ನು ಎಸ್ಸೆಸ್ ಅವರು ಆಧುನಿಕ ಕೊಠಡಿಗಳನ್ನು ನಿರ್ಮಿಸುವ ಮೂಲಕ ಗ್ರಾಮಕ್ಕೆ ಕೊಡುಗೆ ನೀಡಿದ್ದು, ಇದನ್ನು ಗ್ರಾಮದ ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಂಬಣ್ಣ ಮಾತನಾಡಿ, ಈ ಗ್ರಾಮದ ಜನರು ಪಟ್ಟಣದ ಖಾಸಗಿ ಶಾಲೆಗಳಿಗೆ ಮಾರುಹೋಗದೇ ಸರ್ಕಾರದಿಂದ ಮಕ್ಕಳಿಗೆ ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಶಿಕ್ಷಣವನ್ನು ಕೊಡಿಸಿ ಎಂದು ಮನವಿ ಮಾಡಿದರು. ಪಾಲಿಕೆಯ ಮಾಜಿ ಸದಸ್ಯ ಗೌಡ್ರ ರಾಜಶೇಖರ್ ಮತ್ತು ಎಪಿಎಂಸಿ ಮಾಜಿ ಸದಸ್ಯ ಎಂ.ಎಸ್.ಕೊಟ್ರಯ್ಯ ಮಾತನಾಡಿದರು.
ಈ ಸಂದರ್ಭದಲ್ಲಿ ಕಳೂರ್ ಮಹೇಶ್ವರಪ್ಪ, ಮಹಾನಗರ ಪಾಲಿಕೆ ಸದಸ್ಯರಾದ ಶಿವಲೀಲಾ ಕೊಟ್ರಯ್ಯ, ಬಿ.ಎಸ್. ಮರುಳಪ್ಪ, ಬಿ.ಎಸ್.ಸಿದ್ದನಗೌಡರು, ಬಿ.ಕೆ.ದೇವೇಂದ್ರಪ್ಪ, ಕೆ.ಸಿ.ಲಿಂಗರಾಜ್, ಬಿ.ರಮೇಶ್, ನಾಗವೇಣಿ, ವಿಜಯ್ ಕುಮಾರ್, ನವೀನ್, ತಿಪ್ಪೇಸ್ವಾಮಿ, ನಾಗೇಂದ್ರ ಚಾರ್, ಎನ್.ಎಂ.ಕೊಟ್ರಯ್ಯ, ಶೋಭಾ ರಾಣಿ, ಯಶೋಧ, ರೂಪ, ಶೌಖತ್ಅಲಿ, ಸ್ಮಾರ್ಟ್‌ಸಿಟಿ ನಿರ್ದೇಶಕ ಎಂ.ನಾಗರಾಜ್, ಹರೀಶ್ ಕೆ.ಎಲ್.ಬಸಾಪುರ, ಮಲ್ಲಿಕಾರ್ಜುನ್, ಎಚ್.ಮಹೇಂದ್ರ, ಗಣೇಶ್, ಮತ್ತು ಇತರರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಸೋಮಶೇಖರಪ್ಪ ಸ್ವಾಗತಿಸಿದರು, ಶಿಕ್ಷಕಿ ಶಶಿಕಲಾ ನಿರೂಪಿಸಿದರು. ಶಿಕ್ಷಕ ರವಿ ವಂದಿಸಿದರು.