ವಡ್ನಾಳ್ ರಾಜಣ್ಣ ಒಪ್ಪಿದರೆ ಅಭ್ಯರ್ಥಿ
ವಡ್ನಾಳ್ ರಾಜಣ್ಣ ಒಪ್ಪಿದರೆ ಅವರೇ ಅಭ್ಯರ್ಥಿ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು. ವಡ್ನಾಳ್ ರಾಜಣ್ಣ ಟಿಕೆಟ್ಗೆ ಅರ್ಜಿ ಹಾಕಿಲ್ಲ. ಆದರೂ ನಾವು ಅವರಿಗೆ ಟಿಕೆಟ್ ಕೊಡ್ತೀವಿ. ಅವರು ಚನ್ನಗಿರಿಯಲ್ಲಿ ಗೆಲ್ಲುವುದು ಖಚಿತ ಎಂದು ಹೇಳಿದರು.
ಚನ್ನಗಿರಿ, ಮಾ.11- ಸರ್ಕಾರದಲ್ಲಿ ಹೆಚ್ಚಾಗಿರುವ ಭ್ರಷ್ಠಾಚಾರದ ಬಗ್ಗೆ ನಮ್ಮ ಪಕ್ಷ ಪ್ರತಿಭಟನೆ ಮಾಡಿ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದಾಗ ಸಾಕ್ಷಿ ಕೊಡಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಕೇಳಿದ್ದರು. ಈಗ ನೂರಾರು ಸಾಕ್ಷಿಗಳು ಸಿಕ್ಕ ರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಲಿಲ್ಲ. ಬಿಜೆಪಿ ಮುಖಂಡ ರಿಗೆ ಸ್ವಲ್ಪವೂ ನಾಚಿಕೆ, ಮಾನ ಮರ್ಯಾದೆ ಇಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಾವ ಪುರುಷಾರ್ಥಕ್ಕೆ ಇವರು ಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ? ವಿಜಯ ಸಂಕಲ್ಪ ಯಾತ್ರೆ ಮಾಡುವ ಮೂಲಕ ಬಿಜೆಪಿಯವರು ರಾಜ್ಯದ ಜನರಿಗೆ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಹೇಳಿದರು.
ಬಸವರಾಜ ಬೊಮ್ಮಾಯಿ ನೀನು ಆಚಾನಕ್ ಆಗಿ ಮುಖ್ಯಮಂತ್ರಿಯಾಗಿದ್ದೀಯಾ, ನಿನ್ನ ಆಡಳಿತಾವಧಿಯಲ್ಲಿಯೇ ಹೆಚ್ಚು ಭ್ರಷ್ಟಾಚಾರವಾಗಿದೆ ಎಂದ ಸಿದ್ದರಾಮಯ್ಯ, ಗುತ್ತಿಗೆದಾರ ಕೆಂಪಣ್ಣ ಶೇ 40 ಕಮೀಷನ್ ಕೇಳುತ್ತಾರೆ ಎಂದು ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು. ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಶಾಲಾ ಕಾಲೇಜುಗಳ ಆರಂಭಕ್ಕೆ ದುಡ್ಡು ಕೇಳುತ್ತಾರೆ ಎಂದು ಪತ್ರ ಬರೆದರು.
ಬೆಳಗಾವಿ ಜಿಲ್ಲೆಯ ಬಿಜೆಪಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಶಾಸಕ ಕೆ.ಎಸ್. ಈಶ್ವರಪ್ಪ ಕಮೀಷನ್ ಕೊಡಿ ಎಂದು ಕೇಳುತ್ತಾರೆ ಎಂದು ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡರು. ಇಂತಹ ನೂರಾರು ಸಾಕ್ಷಿಗಳು ಕಣ್ಣುಂದೆ ಇದ್ದರೂ ಬೊಮ್ಮಾಯಿ ಮಾತ್ರ ಏನೂ ಆಗಿಲ್ಲ ಎಂದುಕೊಂಡು ಭಂಡತನದಿಂದ ಅಧಿಕಾರದಲ್ಲಿ ಮುಂದುವರಿದಿದ್ದಾರೆ ಎಂದು ಆರೋಪಿಸಿದರು.
ಮಾಜಿ ಶಾಸಕ ವಡ್ನಾಳ್ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾಠೋಡ್, ಮಾಧ್ಯಮ ವಕ್ತಾರ ಡಿ. ಬಸವರಾಜ್, ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ, ಟಿಕೆಟ್ ಆಕಾಂಕ್ಷಿಗಳಾದ ತೇಜಸ್ವಿ ಪಟೇಲ್, ಲಿಂಗರಾಜು, ಪುನೀತ್ ಕುಮಾರ್, ಹೊದಿಗೆರೆ ರಮೇಶ್, ನಿರಂಜನ್, ವಡ್ನಾಳ್ ಜಗದೀಶ್, ವಡ್ನಾಳ್ ಅಶೋಕ್, ಬಸವರಾಜ್ ಶಿವಗಂಗಾ, ತಾಲ್ಲೂಕು ಸಮಿತಿ ಅಧ್ಯಕ್ಷ ಸಿ.ಎಚ್. ಶ್ರೀನಿವಾಸ್, ಸಿ. ನಾಗರಾಜ್ ಇದ್ದರು.