ದೇವನಗರಿಯಲ್ಲಿ ಬಣ್ಣದಾಟದ ಸಂಭ್ರಮ

ದೇವನಗರಿಯಲ್ಲಿ ಬಣ್ಣದಾಟದ ಸಂಭ್ರಮ

ಪಿಚಕಾರಿಯಿಂದ ಚಿಣ್ಣರ ಚಿನಕುರುಳಿ, ರಾಂ ಅಂಡ್ ಕೋ ದಲ್ಲಿ ಮಸ್ತ್ ಡ್ಯಾನ್ಸ್, ತ್ರಿಬ್ಬಲ್ ರೈಡಿಂಗ್

ದಾವಣಗೆರೆ, ಮಾ. 8- ಹೋಳಿ ಅಂದರೇನೇ ಹಾಗೆ, ಚಿಣ್ಣರಲ್ಲಿ, ಯುವಕ-ಯುವತಿಯರಲ್ಲಿ ಉತ್ಸಾಹ ಪುಟಿದೇಳು ತ್ತದೆ. ನಗರದಲ್ಲೂ ಬುಧವಾರ ಹೋಳಿ ಹಬ್ಬದಲ್ಲಿ ಯುವ ಪಡೆ ಮಿಂದೆದ್ದಿತು.

ಒಬ್ಬರಿಗೊಬ್ಬರು ಗುರುತು ಹಿಡಿಯದಷ್ಟು ಮುಖಕ್ಕೆ ಬಣ್ಣ. ಸ್ನೇಹಿತರು, ಸಂಬಂಧಿಗಳನ್ನು ಭೇಟಿ ಮಾಡಿ ಹ್ಯಾಪಿ ಹೋಳಿ ಎನ್ನುತ್ತಲೇ  ಬಣ್ಣ ಮೆತ್ತುತ್ತಾ ಸಂಭ್ರಮಿಸಿದರು.

ಚಿಣ್ಣರಂತೂ ಪಿಚಕಾರಿ ಹಿಡಿದು ಬಣ್ಣದ ನೀರು ಮಿಶ್ರಣ ಮಾಡಿಕೊಂಡು ಸ್ನೇಹಿತರಿಗೆ, ದಾರಿಹೋಕರಿಗೆ ನೀರು ಸಿಡಿಸಿ ಸಂಭ್ರಮಿಸಿದ್ದೇ ಸಂಭ್ರಮಿಸಿದ್ದು. ಬೆಳಿಗ್ಗೆ 8ರ ಹೊತ್ತಿಗಾಗಲೇ ಚಿಣ್ಣರ ಕೈಯಲ್ಲಿ ಪಿಚಕಾರಿಗಳಿದ್ದವು. ಬೇಕಾದ ಬಣ್ಣ ಹಾಗೂ ಪಿಚಕಾರಿ ಹಿಂದಿನ ದಿನ ರಾತ್ರಿಯೇ ಖರೀದಿಯಾಗಿದ್ದವು.

ಮನೆಗಳ ಮುಂದೆ, ಓಣಿಗಳಲ್ಲಿ ಬಣ್ಣದಾಟ ಸಂಭ್ರಮಿಸಿದ ಯುವಕ-ಯುವತಿಯರು ತಿರುಗಿದ್ದು ಹೋಳಿ ಎಂದಾಕ್ಷಣ ಮನದಲ್ಲಿ ಮೂಡುವ ರಾಂ ಅಂಡ್ ಕೋ ವೃತ್ತದ ಕಡೆಗೆ. 10 ಗಂಟೆ ನಂತರ ಇಡೀ ನಗರದ ಯುವ ಪಡೆ ಹರಿದು ಸರ್ಕಲ್ ಬಣ್ಣಮಯವಾಗಿತ್ತು.

ದೇವನಗರಿಯಲ್ಲಿ ಬಣ್ಣದಾಟದ ಸಂಭ್ರಮ - Janathavani

ಬಣ್ಣದಾಟದ ಉತ್ಸಾಹ ಬಡಿದೆಬ್ಬಿಸಲೆಂದೇ ಡಿಜೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಸರ್ಕಲ್ ಮಧ್ಯದ ಕಂಬದ ಬಳಿ ಸ್ಪಿಂಕ್ಲರ್ ಮೂಲಕ ನೀರು ಸಿಂಪರಣೆ ವ್ಯವಸ್ಥೆ ಇತ್ತು. ಇಷ್ಟು ಸಾಕು ಬೇಡ ಎಂದವರೂ ಬಂದು ಕುಣಿಯಲು. 12 ಗಂಟೆವರೆಗೆ ಕುಣಿದು ದಣಿದು ಕೆಲವರು ಮನೆಯತ್ತ ಹೆಜ್ಜೆ ಹಾಕಿದರೆ. ಮತ್ತೆ ಕೆಲವರು ಅದೇ ತಂದ ಬೈಕುಗಳ ಮೂಲಕ ಚಾನಲ್‌ ಕಡೆ ಹೊರಟರು.

ಸಂಭ್ರಮ ತೋರಿಸಲೆಂದೇ ಪೋಷಕರು ತಮ್ಮ ಮಕ್ಕಳನ್ನು ಕರೆ ತಂದಿದ್ದರು. ಹೆಗಲ ಮೇಲೆ ಹೊತ್ತು ತಾವೂ ಸಂಭ್ರಮಿಸಿದರು. ಇತ್ತ ಹುಡುಗರಿಗಿಂತ ನಾವೇನು ಕಮ್ಮಿ? ಎಂದು ಪ್ರಶ್ನಿಸುತ್ತಲೇ ಸಂಭ್ರಮಾಚರಣೆಗೆ ಇಳಿದು ಹುಡುಗಿಯರೂ ಡಿಜೆ ಧ್ವನಿವರ್ಧಕದ ಸದ್ದಿಗೆ ಹೆಜ್ಜೆ ಹಾಕಿದರು. ಯುವತಿಯರ ಸಂಭ್ರಮಕ್ಕೆ ವೃತ್ತದ ಮತ್ತೊಂದು ಬದಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು.  ಪುರುಷ ಹಾಗೂ ಮಹಿಳಾ ಹಾಸ್ಟೆಲ್‌ಗಳಲ್ಲಿ ಹೋಳಿ ಆಟದ ಸಂಭ್ರಮ ಹೆಚ್ಚಾಗಿಯೇ ಇತ್ತು.

ಹೋಳಿ ಸಂಭ್ರಮ ಹೆಚ್ಚಾಗಿ ಕಂಡದ್ದು ಹಳೆ ದಾವಣಗೆರೆ ಯಲ್ಲಿಯೇ. ಜಾಲಿನಗರ, ಬೇತೂರು ರಸ್ತೆ,  ಕಾಯಿಪೇಟೆ, ಚಾಮರಾಜ ಪೇಟೆಗಳಲ್ಲಿ ಅಲ್ಲಲ್ಲಿ, ಹಲಗೆ ಭಾರಿಸುತ್ತಾ ಮಡಿಕೆ ಕಟ್ಟಿ ಹೊಡೆದು ಸಾಂಪ್ರದಾಯಿಕ ಹೋಳಿ ಆಚರಿಸಿದರು.

ತ್ರಿಬಲ್ ರೈಡ್ ಮಾಡದಿದ್ದರೆ, ಹಾಕಿಕೊಂಡಿದ್ದ ಬಟ್ಟೆಗಳನ್ನು ಕಿತ್ತು ತೂರಿ ಅರೆ ಬೆತ್ತಲೆಯಾಗಿ, ಕೂಗುತ್ತಾ, ಹಾರನ್ ಹಾಕುತ್ತಾ  ಕೆಲ ಯುವಕರ ಪಾಲಿಗೆ ಹೋಳಿ ಸಂಭ್ರಮ ಪೂರ್ಣಗೊಳ್ಳದು ಎಂಬಂತೆ ಇಂದೂ ಸಹ ಅದನ್ನೇ ಅನುಸರಿಸಿದರು.

error: Content is protected !!