ಮನೆಯೇ ಮೊದಲ ಪಾಠಶಾಲೆ,
ಜನನಿ ತಾನೇ ಮೊದಲ ಗುರುವು
ಜನನಿಯಿಂದ ಪಾಠ ಕಲಿವ ಜನರು ಧನ್ಯರು, ಅಂದರೆ ಮನೆಯಿಂದಲೇ ಮಗುವಿನ ಕಲಿಕೆ ಆರಂಭವಾಗುತ್ತದೆ. ತಿಳಿವಳಿಕೆಯ ಮೊದಲ ಅರ್ಥ ಬರುವಷ್ಟರಲ್ಲಿ ಅದಕ್ಕೊಂದು ರೂಪ ನೀಡಲು ಶಾಲೆ ಎಂಬ ಹೊಸ ಬದುಕು ಶುಭಾರಂಭವಾಗುತ್ತದೆ. ಅಲ್ಲಿಂದ ಕಲಿಕೆ ಎಂಬುದು ನಿರಂತರ, ಏಕೆಂದರೆ ಕಲಿಯುವುದಿನ್ನೂ ಸಾಗರ ದಷ್ಟಿದೆ ಕಲಿತವರಾರಿಲ್ಲಿ ಎಂಬ ಮಾತಿನಂತೆ ಅದಕ್ಕೆ ಕೊನೆಯೇ ಇಲ್ಲ. ಆದರೆ ಈ ಕಲಿಕೆಗೆ ಒಂದು ಅರ್ಥ ದೊರೆಯಬೇಕಾದರೆ ಆ ವಿದ್ಯಾರ್ಥಿ ಒಂದು ಹಂತದವರೆಗೂ ಓದಿ ಉದ್ಯೋಗಕ್ಕೆ ಸೇರಿ ತನ್ನ ಕಾಲಮೇಲೆ ತಾನು ನಿಂತು ಸ್ವಾವಲಂಬಿಯಾಗಿ ಬಾಳಬೇಕಾಗುತ್ತದೆ.
ಈ ಹಂತಕ್ಕೆ ಬಂದು ಸಮಾಜದಲ್ಲಿ ಒಂದು ವ್ಯಕ್ತಿತ್ವ ರೂಪಿಸಿಕೊಳ್ಳಬೇಕಾದರೆ ಶಾಲೆಯ ಹಂತದಿಂದಲೇ ಓದುವಿಕೆ ಅನಿವಾರ್ಯ, ಪಠ್ಯಪುಸ್ತಕಗಳ ಪಾಠಗಳ ಜೊತೆ ಜೊತೆಗೆ ಬದುಕಿನ ಪಾಠವೂ ಅಗತ್ಯವೇ ಸರಿ. ಆರಂಭದ ದಿನಗಳಲ್ಲೇ ಒಂದು ಗುರಿ, ಉದ್ದೇಶ ವಿದ್ಯಾರ್ಥಿಗೆ ಇರಲೇಬೇಕು. ಅದಕ್ಕೆ ಶಿಕ್ಷಕರು, ಪೋಷಕರು ನೀರೆರೆಯುತ್ತಾರೆ. ಆದರೆ ಇಂದಿನ ಅದೆಷ್ಟೋ ಮಕ್ಕಳು ಗುರಿ ಇಟ್ಟುಕೊಳ್ಳುತ್ತಾರೆ, ಆದರೆ ಅದನ್ನು ಈಡೇರಿಸುವ ಗೋಜಿಗೆ ಹೋಗುವುದಿಲ್ಲ, ಅಲ್ಲಿಯೇ ಎಡವುತ್ತಾರೆ.
ವಿದ್ಯಾರ್ಥಿ ಜೀವನ ಬಂಗಾರದಂತೆ ಎಂಬ ಮಾತಿದೆ. ಬಂಗಾರ ಹೇಗೆ ಒಂದು ಸುಂದರ ರೂಪ ಪಡೆಯಲು ಕಷ್ಟಪಡುತ್ತದೆಯೋ ಹಾಗೆ ವಿದ್ಯಾರ್ಥಿಯು ಕಷ್ಟ ಪಡಲೇಬೇಕು. ಯೋಗ್ಯ ಗುರಿ ಹೊಂದಿ ಸತತ ಪರಿಶ್ರಮ ಪಡುತ್ತಾ ಕ್ಷಣಿಕ ಸುಖ, ಆಸೆಗಳಿಂದ ವಿಮುಕ್ತಿ ಹೊಂದಿ ಸಾಧಕನಾಗಲೇಬೇಕು. ಅದಕ್ಕಾಗಿ ಅವನು ತನ್ನ ಬೆಳಗಿನ ಏಳುವಿಕೆಯಿಂದಾ ರಾತ್ರಿ ಮಲಗುವ ವರೆಗೂ ಒಂದು ವೇಳಾಪಟ್ಟಿ ಸಿದ್ದಪಡಿಸಿಕೊಳ್ಳಲೇಬೇಕು. ಬೆಳಗಿನ ಜಾವದ ಓದು ತುಂಬಾ ಉಪಯುಕ್ತ ಎನ್ನುತ್ತಾರೆ. ಅಂತೆಯೇ ಬೇಗನೇ ಎದ್ದು ಓದಿಗೆ ತೊಡಗಿಕೊಳ್ಳಬೇಕು, ಏಕೆಂದರೆ ‘ಹನಿ ಹನಿ ಗೂಡಿದರೆ ಹಳ್ಳ’ ಎಂಬಂತೆ ಪ್ರತಿದಿನದ ಸ್ವಲ್ಪ ಸ್ವಲ್ಪ ಓದು ಪರೀಕ್ಷೆ ಹತ್ತಿರ ಬಂದಾಗ ಧೈರ್ಯ ಸ್ಥೈರ್ಯ ನೀಡುತ್ತದೆ. ವರುಷದ ಓದಿಗೆ ಮೂರು ಗಂಟೆಗಳ ಬರವಣೆಗೆಯೇ ನಿಜವಾದ ಫಲಿತಾಂಶವಾಗಿರುವುದರಿಂದ ಅದರತ್ತ ಗಮನ ಹರಿಸಬೇಕು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಜ್ಞಾನವಂತನಾಗಿದ್ದರೂ ಕಡಿಮೆಯೇ, ಇದನ್ನರಿತು ಭವಿಷ್ಯದ ಬದುಕಿಗೆ ಸರಿಯಾದ ರೂಪ ಕೊಡಲು ಕಷ್ಟಪಟ್ಟು ಓದಿ ಉತ್ತಮ ಅಂಕ ಗಳಿಸಬೇಕಾಗುತ್ತದೆ. ತಾವು ಕಾಣದ ಸುಖ, ತಾವು ಸಾಧಿಸದ ಓದು, ಬದುಕಿನಲ್ಲಿ ಮಕ್ಕಳಲ್ಲಿ ಪರಿಪೂರ್ಣಗೊಳಿಸುವ ಸಲುವಾಗಿ ಹೆತ್ತವರು ತಮ್ಮ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ಮಕ್ಕಳ ಶಾಲಾ-ಕಾಲೇಜು ಶುಲ್ಕ, ಬಟ್ಟೆ, ಪುಸ್ತಕ, ಬೇಕಾದುದನ್ನೆಲ್ಲಾ ಸಾಲ ಮಾಡಿಯಾದರೂ ಪೂರೈಸುತ್ತಾರೆ. ಅಂತಹ ತ್ಯಾಗಮಯಿ ಪೋಷಕರಿಗೆ ನೀವು ನೀಡುವುದಾದರೂ ಏನನ್ನು? ಉತ್ತಮ ಅಂಕಗಳನ್ನು ಮಾತ್ರ ತಾನೆ. ಅದಕ್ಕಾಗಿ ಮೊಬೈಲ್, ಟಿ.ವಿ., ಕ್ಷಣಿಕ ಖುಷಿಗಳನ್ನು ದೂರಗೊಳಿಸುತ್ತಾ ಜೊತೆಯ ಓದುಗರೊಂದಿಗೆ ಆರೋಗ್ಯಕರ ಸ್ಪರ್ಧೆ ಮಾಡುತ್ತಾ ನಿದ್ದೆಗೆಟ್ಟು ಓದದೇ ಆರೋಗ್ಯ ಕಾಪಾಡಿಕೊಳ್ಳುತ್ತಾ, ಮನವಿಟ್ಟು ಓದುತ್ತಾ, ಓದಿದ್ದನ್ನು ಬರೆಯುತ್ತಾ, ಬರೆದಿದ್ದನ್ನ ಮನನ ಮಾಡುತ್ತಾ, ಪರೀಕ್ಷಾ ಸಮಯದಲ್ಲಿ ಒತ್ತಡಕ್ಕೆ ಒಳಗಾಗದೇ ಸಮಾಧಾನ ಚಿತ್ತದಿ ಹಾಳೆಗಿಳಿಸಲೇಬೇಕು. ಏಕೆಂದರೆ ಹತ್ತು ಸಾರಿ ಓದುವುದೂ ಒಂದೇ, ಒಂದು ಸಾರಿ ಬರೆಯುವುದೂ ಒಂದೇ ಎಂಬ ಅನುಭವದ ಮಾತಿನಂತೆ ಬರೆದು ಬರೆದು ಕಲಿಯಬೇಕು. ಕಲಿತ ಕಲಿಗಳಾಗಬೇಕು.
`ವಿದ್ಯೆಯುಳ್ಳವನ ಮುಖವು ಮುದ್ದು ಬರು ವಂತಿಕ್ಕು ಎನ್ನುವ ಸರ್ವಜ್ಞನ ಮಾತಿನಂತೆ ನೀವು ಜ್ಞಾನವಂತನಾದರೆ ಎಲ್ಲದರಲ್ಲಿಯೂ, ಎಲ್ಲ ರೊಡನೆಯೂ ವಿಶೇಷ ಗೌರವ ದೊರೆಯುತ್ತದೆ, ಏಕೆಂದರೆ ಕವಿ ಶಿವರಾಮ ಕಾರಂತರು ಹೇಳಿದಂತೆ ಯಾರೂ ಕದಿಯದ ಆಸ್ತಿ ವಿದ್ಯೆಯನ್ನು ಸಂಪಾದಿಸಿ ನೀವೇ ಬೆಲೆಕಟ್ಟಲಾಗದ ಆಸ್ತಿಯಾಗಿ.
ಯಾವುದೇ ತಂತ್ರಜ್ಞಾನವಾಗಲೀ, ಪಠ್ಯವಾಗಲೀ, ವಿಧಾನ, ಪದ್ಧತಿಗಳೇ ಆಗಲಿ ಈಗ ಇರುವುದನ್ನು ಓದಿನ ಮುಖೇನ ಕಲಿತರೆ ಮುಂದೆ ಕಾಲ ಬದಲಾದಂತೆ ಹೊಸ ಸ್ವರೂಪ ನೀಡಲು ನಿಮಗೆ ಸಾಮರ್ಥ್ಯ ಬರುತ್ತದೆ. ಪ್ರತಿಯೊಂದು ಬದ ಲಾವಣೆಗೂ, ಹೊಸ ವಿಧಾನಗಳಿಗೆ ಒಗ್ಗಿ ರೂಪ ನೀಡಲು ಕಲಿಕೆ ಅತ್ಯವಶ್ಯಕ. ಈಗ ಇರುವುದನ್ನು ಅರ್ಥೈಸಿಕೊಳ್ಳಲು ಓದು ಅತ್ಯಗತ್ಯ. ವ್ಯಾಪಾರ, ವ್ಯವಹಾರ, ಉದ್ಯೋಗ, ದುಡಿಮೆ ಯಾವುದೇ ಕ್ಷೇತ್ರದಲ್ಲಿ ನೀವು ನೆಲೆ ನಿಲ್ಲಲು ಓದು ಪ್ರಮುಖವಾಗುತ್ತದೆ.
ಈ ಸಂದರ್ಭಕ್ಕೆ ಡಾ. ಎಲ್. ಹನುಮಂತಯ್ಯನವರ ಈ ಕವನ ಅರ್ಥಪೂರ್ಣವೆನಿಸುತ್ತದೆ.
ಗುಡಿಸಲ ಗರಿಗಳ | ಅರಳೋ ಮಲ್ಲಿಗೆ ಮಾಡೋ ಅಕ್ಷಾರ ಅಕ್ಷಾರವೇ |
ಸಂಕೋಲೆಗಳ ಬಿಡಿಸಿ ಸುಂಕವಿಲ್ಲದೆ ಕಳಿಸೋ | ಅಕ್ಷಾರ ಅಕ್ಷಾರವೇ
ಮುಗಿಸುವ ಮುನ್ನ ಪ್ರೀತಿಯ ವಿದ್ಯಾರ್ಥಿಗಳೇ,
ನಿಮ್ಮ ಭವಿಷ್ಯದ ಬದುಕು ಜೋಪಾನ,
ಮಾಡಿಕೊಳ್ಳಿ ಅದುವೇ ಸುಖದ ಸೋಪಾನ,
ಅಲ್ಲಿಯೇ ಇರುವುದು ನಿಮ್ಮ ಜಾಣತನ.
ಮುಂಬರುವ ನಿಮ್ಮ ಬದುಕಿನ ತಿರುವು ಭವಿತ ವ್ಯದ ಪರೀಕ್ಷೆ ಯಶಸ್ವಿಯಾಗಲಿ, ಉತ್ತಮ ಫಲಿತ ತರಲಿ, ಶುಭವಾಗಲಿ, ನೀವು ಗೆಲುವಿನ ನಗೆ ಬೀರಲಿ ಎಂದು ಆಶಿಸುತ್ತಾ, ಕವಿವಾಣಿಯಂತೆ ಮೊಬೈಲ್ ನೋಡುತ್ತಾ, ಗೋಣು ಹಾಕಿ ಕೂರಬೇಡ ಗತ್ತಿನಾಗ ಬಾಳು ನೋಡ’.
– ಶ್ರೀಮತಿ ಉಷಾ ಈ., ಕನ್ನಡ ಉಪನ್ಯಾಸಕರು, ಎಸ್.ಎ.ಜಿ.ಬಿ.ಸಂ.ಪ.ಪೂ.ಕಾ, ದಾವಣಗೆರೆ. 98445 72738