ಶೀಘ್ರದಲ್ಲೇ ಪೌರ ಕಾರ್ಮಿಕರಿಗೆ ಮನೆ ಹಸ್ತಾಂತರ : ಸಚಿವ ಭೈರತಿ

ಶೀಘ್ರದಲ್ಲೇ ಪೌರ ಕಾರ್ಮಿಕರಿಗೆ ಮನೆ ಹಸ್ತಾಂತರ : ಸಚಿವ ಭೈರತಿ

ದಾವಣಗೆರೆ, ಮಾ.5- ಪೌರ ಕಾರ್ಮಿಕರ ಕಲ್ಯಾಣ ಮತ್ತು ಜೀವನ ಭದ್ರತೆಗಾಗಿ ರಾಜ್ಯ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ನಗರಾಭಿವೃದ್ಧಿ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು.

ಭಾನುವಾರ ಪಾಲಿಕೆ ವ್ಯಾಪ್ತಿಯ ದೊಡ್ಡಬೂದಿಹಾಳ ಗ್ರಾಮದಲ್ಲಿ ಪೌರ ಕಾರ್ಮಿಕರ ಮನೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪೌರ ಕಾರ್ಮಿಕರ ಆರೋಗ್ಯ ಮತ್ತು ಜೀವನ ಸುಧಾರಣೆಗೆ ಸರ್ಕಾರ ಮೊದಲ ಆದ್ಯತೆ ನೀಡಿದೆ. 9 ಎಕರೆ 20 ಗುಂಟೆ ಜಾಗದಲ್ಲಿ 51 ಕೋಟಿ ರೂ. ವೆಚ್ಚದಲ್ಲಿ ಜಿ+1 ಮಾದರಿಯ 381 ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರತಿ ಬ್ಲಾಕ್‌ನಲ್ಲಿ ನೆಲ ಹಾಗೂ ಮೊದಲ ಮಹಡಿ ಸೇರಿ ಒಟ್ಟು 4 ಮನೆಗಳಿದ್ದು, ಪ್ರತಿ ಮನೆಗೆ 13.40 ಲಕ್ಷ ರೂ. ನಿರ್ಮಾಣ ವೆಚ್ಚ  ತಗುಲಿದೆ. ಪಾರದಶರ್ಕವಾಗಿ ಶೀಘ್ರವೇ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು ಎಂದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಗರದ ಕುಂದುವಾಡದ ಬಳಿ ಖಾಸಗಿ ಲೇಔಟ್‌ನ ಸಿ.ಎ ನಿವೇಶನದಲ್ಲಿ 3.93 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ತಲಾ 50 ಸಂಖ್ಯಾಬಲದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಉದ್ಯೋಗಸ್ಥ ಮಹಿಳಾ ನಿಲಯ ಮತ್ತು ರೂ.5.82 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಮಿನಿ ವಿಧಾನಸೌಧ ಕಟ್ಟಡಗಳನ್ನು ಉದ್ಘಾಟಿಸಿದರು.

ನಂತರ ಸಚಿವರು ಸ್ಮಾರ್ಟ್ ಸಿಟಿ ಯೋಜನೆಯಡಿ 26.42 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ  ನವೀಕೃತ ಖಾಸಗಿ ಬಸ್ ನಿಲ್ದಾಣ ಲೋಕಾರ್ಪಣೆಗೊಳಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ್, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ವಿ.ರಾಮಚಂದ್ರ, ಎಂಎಲ್‌ಸಿ ಮೋಹನ್ ಕೊಂಡಜ್ಜಿ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಪಾಲಿಕೆ ಮೇಯರ್ ವಿನಾಯಕ ಬಿ.ಹೆಚ್, ಉಪ ಮೇಯರ್ ಯಶೋಧ ಹೆಗ್ಗಪ್ಪ, ಪಾಲಿಕೆ ಆಯುಕ್ತೆ ರೇಣುಕಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!