ಬಿಜೆಪಿಯಿಂದ ಸಶಕ್ತೀಕರಣದ ರಾಜಕೀಯ : ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ
ದಾವಣಗೆರೆ, ಮಾ. 5 – ಕಾಂಗ್ರೆಸ್ ಪಕ್ಷ ಈಡೇರಿಸಲು ಸಾಧ್ಯವಾಗದ ‘ಗ್ಯಾರಂಟಿ’ ನೀಡುತ್ತಾ ಸುಳ್ಳು ರಾಜಕಾರಣ ಮಾಡುತ್ತಿದೆ. ಬಿಜೆಪಿ ಜನರ ಸಶಕ್ತೀಕರಣದ ರಾಜಕೀಯ ಮಾಡುತ್ತಿದೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕೇಂದ್ರ ಮತ್ತು ರಾಜ್ಯಗಳ ವಿವಿಧ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಆಡಳಿತದ ಛತ್ತೀಸ್‌ಘಡದಲ್ಲಿ ರಾಹುಲ್ ಗಾಂಧಿ ತಿಳಿಸಿದ ನಿರುದ್ಯೋಗಿ ಭತ್ಯೆಯ ಗ್ಯಾರಂಟಿ ಜಾರಿಗೆ ಬಂದಿಲ್ಲ. ರಾಜಸ್ಥಾನದಲ್ಲಿ ಸಾಲ ಮನ್ನಾದ ಗ್ಯಾರಂಟಿ ಈಡೇರಿಲ್ಲ. ತಮ್ಮ ಆಡಳಿತಾವಧಿಯಲ್ಲಿ ದೇಶಕ್ಕೆ ಅಗತ್ಯವಾದ ಪ್ರಮಾಣದ ವಿದ್ಯುತ್ ಉತ್ಪಾದಿಸಲಿಲ್ಲ. ವಿದ್ಯುತ್ ಉತ್ಪಾದಿಸಲು ಆಗದವರು, ಈಗ ಉಚಿತ ವಿದ್ಯುತ್ ಗ್ಯಾರಂಟಿ ನೀಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಮತ್ತೊಂದೆಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರತಿ ಮನೆಗೂ ನಲ್ಲಿ, ಹೊಗೆ ಮುಕ್ತ ಅಡುಗೆ ಮನೆಗಾಗಿ ಉಜ್ವಲ ಸಿಲಿಂಡರ್ ಯೋಜನೆ, ವಿದ್ಯುತ್ ಹೊರೆ ಕಡಿಮೆ ಮಾಡುವ ಉಜಾಲ, ಬ್ಯಾಂಕ್ ಖಾತೆಗಳಿಗೆ ನೇರ ನೆರವು ಜಮಾ ಯೋಜನೆಗಳ ಮೂಲಕ ಜನರನ್ನು ಸಶಕ್ತೀರಣಗೊಳಿಸುತ್ತಿದ್ದಾರೆ ಎಂದರು.
ಮುಂದಿನ ಚುನಾವಣೆಯಲ್ಲಿ ಗ್ಯಾರಂಟಿ ಅನ್ನುವವರು ಮನೆಗೆ ಹೋಗಲಿದ್ದಾರೆ. ಮೋದಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರದಲ್ಲಿ ಪರಿವರ್ತನೆ ಆಗಲಿದೆ ಎಂದು ಜೋಷಿ ಭವಿಷ್ಯ ನುಡಿದರು.
ಶಾಸಕ ಮಾಡಾಳ್ ವಿರುದ್ಧ ಮತ್ತಷ್ಟು ಕ್ರಮ : ಜೋಷಿ
ದಾವಣಗೆರೆ, ಮಾ. 5 – ಲೋಕಾಯುಕ್ತ ಲಂಚ ಪ್ರಕರಣದಲ್ಲಿ ಸಿಲುಕಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಅಗತ್ಯವಾದಲ್ಲಿ ಮತ್ತಷ್ಟು ಶಿಸ್ತು ಕ್ರಮ ತೆಗೆದುಕೊಳ್ಳಲಾಗು ವುದು ಎಂದು ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತಪ್ಪು ಮಾಡಿದವರಿಗೆ ಪಾಠ ಆಗಬೇಕು, ಕಾನೂನು ರೀತಿಯ ಕ್ರಮ ಆಗಬೇಕು. ಪಕ್ಷದ ಸೂಚನೆಯಂತೆ ವಿರೂಪಾಕ್ಷಪ್ಪ ರಾಜೀನಾಮೆ ನೀಡಿದ್ದಾರೆ. ಅಗತ್ಯವಾದರೆ ಇನ್ನಷ್ಟು ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಲೋಕಾ ಯುಕ್ತರ ಕ್ರಮದಿಂದ ಹಿನ್ನಡೆ ಪ್ರಶ್ನೆಯೇ ಇಲ್ಲ. ಲೋಕಾಯುಕ್ತವನ್ನು ಸಂಪೂರ್ಣವಾಗಿ ಬಲಪಡಿಸಿದ್ದೇವೆ. ಲೋಕಾಯುಕ್ತರು ತೆಗೆದುಕೊಳ್ಳುವ ಕ್ರಮವನ್ನು ಪ್ರಶಂಸಿಸಬೇಕಿದೆ. ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಹಾಗೂ ಪರಿವಾರವಾದಕ್ಕೆ ಬಿಜೆಪಿ ವಿರುದ್ಧವಾಗಿದೆ ಎಂದರು.
ಸಿ.ಎಸ್.ಆರ್. ನಿಧಿ ಆರೋಪತಳ್ಳಿ ಹಾಕಿದ ಸಚಿವ ಭೈರತಿ
ದಾವಣಗೆರೆ, ಮಾ. 5 – ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಸಿ.ಎಸ್.ಆರ್. ನಿಧಿಯ ಬಳಕೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಮಾಡಲಾಗಿರುವ ಆರೋಪ ತಳ್ಳಿ ಹಾಕಿರುವ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ, ಸರ್ಕಾರಿ ಶಾಲಾ ಮಕ್ಕಳ ಶಾಲೆಗಳಿಗಾಗಿ ನಿಧಿ ಬಳಸಲಾಗಿದೆ. ಇದೆಲ್ಲದಕ್ಕೂ ಲೆಕ್ಕ ಇದೆ ಎಂದಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾನು ಕಂಪನಿಯ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಸರ್ಕಾರದ ನಿಯಮಗಳ ಅನ್ವಯ ಸಿ.ಎಸ್.ಆರ್. ನಿಧಿಯ ಬಳಕೆ ಮಾಡಲಾಗಿದೆ. ಅದರ ಸಂಪೂರ್ಣ ವಿವರ ನೀಡಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಮಾತನಾಡಿ, ಬಿಜೆಪಿಯು ಜನಪರ ಹಾಗೂ ಬಡವರ ಪರವಾದ ಸರ್ಕಾರ ನೀಡುತ್ತಿದೆ. ರಾಜ್ಯದ ಹೃದಯ ಭಾಗದಲ್ಲಿರುವ ದಾವಣಗೆರೆಯಲ್ಲಿ ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗಲಿದೆ ಎಂದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಮುಂದಿನ ಎರಡು ತಿಂಗಳಲ್ಲಿ ಜನರ ಮನೆ ಬಾಗಿಲಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಲಾಗುವುದು. ಜನರು ಮುಂದಿನ ಚುನಾವಣೆಯಲ್ಲಿ ಆಶೀರ್ವಾದ ಮಾಡಿ ಅವಕಾಶ ಕೊಡಬೇಕೆಂದು ಕರೆ ನೀಡಿದರು.
ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಜಗಳೂರಿನ 57 ಕೆರೆ ನೀರು ತುಂಬಿಸುವ, ಮನೆ ಮನೆಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ 482 ಕೋಟಿ ರೂ. ಹಾಗೂ 45 ಸಾವಿರ ಎಕರೆ ಜಮೀನಿಗೆ ನೀರಾವರಿ ಕಲ್ಪಿಸುವ ತ್ರಿವಳಿ ಯೋಜನೆಗಳು ಜಾರಿಯಾಗಿವೆ ಎಂದರು.
ಶಾಸಕ ಪ್ರೊ. ಲಿಂಗಣ್ಣ ಹಾಗೂ ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಬಸವರಾಜ ನಾಯ್ಕ ಮಾತನಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ 119 ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸೌಲಭ್ಯಗಳನ್ನು ವಿತರಿಸಲಾ ಯಿತು. ಶಾಸಕ ಎಸ್.ಎ. ರವೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯ ಮೇಲೆ ಸಚಿವ ಆಚಾರ್ ಹಾಲಪ್ಪ, ಬಸಪ್ಪ, ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್, ದೂಡಾ ಅಧ್ಯಕ್ಷ ಎ.ವೈ. ಪ್ರಕಾಶ್, ಉಪ ಮೇಯರ್ ಯಶೋಧ ಹೆಗ್ಗಪ್ಪ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಎಸ್ಪಿ ಸಿ.ಬಿ. ರಿಷ್ಯಂತ್, ಜಿ.ಪಂ. ಸಿಇಒ ಎ. ಚನ್ನಪ್ಪ, ಪಾಲಿಕೆ ಆಯುಕ್ತೆ ರೇಣುಕಾ, ಮಾಜಿ ಮೇಯರ್ ಎಸ್.ಟಿ. ವೀರೇಶ್, ಪಾಲಿಕೆ ಸದಸ್ಯ ಕೆ.ಎಂ. ವೀರೇಶ್ ಮತ್ತಿತರರು ಉಪಸ್ಥಿತರಿದ್ದರು.
ಸೌಲಭ್ಯಗಳ ವಿತರಣೆ, ಪ್ರದರ್ಶನ ಮಳಿಗೆ :
ಸಮ್ಮೇಳನದಲ್ಲಿ ಆಯ್ದ ಫಲಾನುಭವಿಗಳಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸೌಲಭ್ಯಗಳನ್ನು ವಿತರಿಸಿದರು. ಸಮ್ಮೇಳನದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ, ವಿಕಲಚೇತನ ಸೇರಿದಂತೆ ವಿವಿಧ ಇಲಾಖಾ ಫಲಾನುಭವಿಗಳು ಯೋಜನೆಗಳಿಂದ ತಮ್ಮ ಬದುಕಿನಲ್ಲಿ ಉಂಟಾದ ಬದಲಾವಣೆ ಕುರಿತಂತೆ ಅನಿಸಿಕೆ ಹಂಚಿಕೊಂಡರು. ಫಲಾನುಭವಿಗಳ ಜಾಗೃತಿಗಾಗಿ 60ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಿ ಸರ್ಕಾರದ ಯೋಜನೆಗಳ ಮಾಹಿತಿಯನ್ನು ನೀಡಲಾಯಿತು. ಈ ಸಮ್ಮೇಳನದಲ್ಲಿ 30 ಸಾವಿರದಷ್ಟು ಜನರು ಸೌಲಭ್ಯಗಳನ್ನು ಪಡೆದಿದ್ದಾರೆ ಎಂದು ಸಚಿವ ಜೋಷಿ ಹೇಳಿದರು.