ತಳಸಮುದಾಯದ ವಿಶಿಷ್ಟ ಕಲೆಗಳಿಗೆ ಪುನರ್ಜೀವ

ತಳಸಮುದಾಯದ ವಿಶಿಷ್ಟ ಕಲೆಗಳಿಗೆ ಪುನರ್ಜೀವ

`ಮೂಲ ಸಂಸ್ಕೃತಿ, ಕನ್ನಡ ಸಂಸ್ಕೃತಿ’  ಕಾರ್ಯಕ್ರಮದಲ್ಲಿ ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ

ದಾವಣಗೆರೆ, ಮಾ.3- ದೇಶದ ಮೂಲ ತಳಹದಿ ಜಾನಪದ ಸಂಸ್ಕೃತಿಯಲ್ಲಿದ್ದು, ನಶಿಸುತ್ತಿರುವ ತಳಸಮುದಾಯಗಳ ಜಾನಪದ ಕಲೆಗಳಿಗೆ ಪುನರ್ಜೀವನ ನೀಡುವ ಉದ್ದೇಶದಿಂದ ಯೋಜನೆ ಜಾರಿಗೊಳಿಸಲಾಗಿದೆ ಎಂದು ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿ ಯೋಜನೆಯ ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ ಹೇಳಿದರು.

ಶುಕ್ರವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೂಲ ಸಂಸ್ಕೃತಿ, ಕನ್ನಡ ಸಂಸ್ಕೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾವಿರಾರು ವರ್ಷಗಳ ಭಾರತದ ಇತಿಹಾಸದಲ್ಲಿ ಮೊದಲ ಸ್ಥಾನದಲ್ಲಿದದ್ದು ಜಾನಪದ ಸಂಸ್ಕೃತಿ. ಈ ಸಂಸ್ಕೃತಿಯ ಆಧಾರದ ಮೇಲೆ ಭಾರತೀಯರ ಜೀವನ ಪದ್ಧತಿ ನಡೆದು ಬಂದಿದೆ. ಕಾಲಕ್ರಮೇಣ ನಶಿಸಿ ಹೋಗುತ್ತಿರುವ ತಳಸಮುದಾಯಗಳ ವಿಶಿಷ್ಟ ಕಲೆ ಮತ್ತು ಕಲಾ ಪ್ರಕಾರಗಳ ಪುನರ್ಜೀವನ ಮಾಡುವುದಕ್ಕಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

 ರಾಜ್ಯದ 31 ಜಿಲ್ಲೆಗಳಲ್ಲಿ ನಶಿಸಿ ಹೋದ ಕಲೆಗಳನ್ನು ಹುಡುಕಿ, ಸಂಬಂಧಪಟ್ಟ ಕಲೆಗಳಿಗೆ ತರಬೇತಿ ನೀಡಲು ತರಬೇತುದಾರರ ನೇಮಿಸಿ ಪ್ರತಿ ಜಿಲ್ಲೆಯಲ್ಲೂ ಐದು ಪ್ರಕಾರದ ಕಲೆಗಳಿಗೆ 10 ವಿದ್ಯಾರ್ಥಿಗಳ ಒಂದು ತಂಡ ರಚನೆ ಮಾಡಿ ತರಬೇತಿ ನೀಡಲಾಗಿದೆ. ಒಟ್ಟು ರಾಜ್ಯದ 1800 ಜನ ನೂತನ ಶಿಬಿರಾರ್ಥಿಗಳಿಗೆ 350 ಜನ ಶಿಕ್ಷಕರಿಂದ ತರಬೇತಿ ಕೊಡಿಸಲಾಗಿದೆ ಎಂದು ತಿಳಿಸಿದರು.

ಪ್ರಮುಖವಾಗಿ ಮೂವತ್ತು ವರ್ಷದ ಒಳಗಿನ ಯುವಕರನ್ನ ಆಯ್ಕೆ ಮಾಡಿಕೊಂಡು ತರಬೇತಿ ನೀಡಲಾಗಿದೆ. 5 ತಂಡಗಳಲ್ಲಿ ಎರಡು ತಂಡಗಳಿಗೆ ರಾಜ್ಯಮಟ್ಟದ ಉತ್ಸವದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುತ್ತದೆ. ಹೊಸದಾಗಿ ಕಲಿತ 62 ತಂಡಗಳು ಭಾಗವಹಿಸಲಿದ್ದು, 600 ಹೊಸ ಕಲಾವಿದರು ಇಲಾಖೆಯ ಮೂಲಕ ಪ್ರವೇಶ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ನೂತನವಾಗಿ ಆಯ್ಕೆಯಾದ 62 ಕಲಾ ತಂಡಗಳಿಗೆ ಮುಂದಿನ ತಿಂಗಳಿನಿಂದಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರೋತ್ಸಾಹಿಸಿ ಕಾರ್ಯಕ್ರಮ ನೀಡುವ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಮೂಲಕ 650 ಕಲಾವಿದರಿಗೆ ಅಧಿಕೃತವಾದ ಕಲಾವಿದರೂ ಎಂದು ಘೋಷಣೆ ಮಾಡಲಾಗುತ್ತದೆ ಎಂದರು.

ಕರ್ನಾಟಕ ರಾಜ್ಯೋತ್ಸವ ಹಾಗೂ ಕನಕಶ್ರೀ ಪ್ರಶಸ್ತಿ ಪುರಸ್ಕೃತರಾದ ಯುಗಧರ್ಮ ರಾಮಣ್ಣ ಮಾತನಾಡಿ, ಭರತಖಂಡದ ಮೂಲ ಸಂಸ್ಕೃತಿ ಅಡಗಿರುವುದು ಹಳ್ಳಿಗಳಲ್ಲಿ, ಕನ್ನಡದ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳೆಲ್ಲರೂ ಹಳ್ಳಿಯ ಮೂಲದವರಾಗಿದ್ದಾರೆ. ಜಾನಪದ ಶಿಕ್ಷಣವು ಶ್ರಮ, ಕ್ರಮ, ಪರಿಶ್ರಮ, ಪರಾಕ್ರಮ, ವಿಕ್ರಮ ಎಂಬ ಐದು ತತ್ವ ಹಾಗೂ ಏಳು ಸೂತ್ರದಿಂದ ಕೂಡಿದೆ ಎಂದರು.

ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಮಾತನಾಡಿ, ಆಧುನಿಕತೆಯ ಭರದಲ್ಲಿ ನಶಿಸಿ ಹೋಗುತ್ತಿರುವ ವಿಶಿಷ್ಟ ಜಾನಪದ ಕಲೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಮಹದುದ್ದೇಶದಿಂದ ಸರ್ಕಾರ ಕಲೆಗಳಿಗೆ ಪುನಃ ಪ್ರೋತ್ಸಾಹ ನೀಡುವ ಭಾಗವಾಗಿ ತರಬೇತಿ ನೀಡಿ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ದಾವಣಗೆರೆ ವಿ.ವಿಯ ಜಿ.ಆರ್‌ ಹಳ್ಳಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಹೆಚ್‌.ವಿಶ್ವನಾಥ್ ಜಾನಪದ ಕಲೆ ಮತ್ತು ಸಂಸ್ಕೃತಿಯ ಕುರಿತು ವಿಶೇಷ ಉಪನ್ಯಾಸ ನೀಡಿದರು.  ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿಯ ಜಿಲ್ಲಾ ಸಂಚಾಲಕರಾದ ಆಲೂರು ನಿಂಗರಾಜ್ ಹಾಗೂ ಮುರಾರ್ಜಿ ಚಿತ್ರದುರ್ಗ ಇವರು ಮಾತನಾಡಿದರು.

ಈ ವೇಳೆ ಕರಡಿ ಮಜಲು, ಬಯಲಾಟ, ಕೋಲಾಟ, ತಮಟೆ, ನಂದಿಕೋಲು ಸಮಾಳ ಕಲೆಗಳ ತಂಡದವರು ಮನಮೋಹಕ ಪ್ರದರ್ಶನ ನೀಡಿದರು.

ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಜಾನಪದ ಕಲಾ ತಂಡದ ಗುರುಗಳಾದ ಮಲ್ಲೇಶಪ್ಪ, ಬಡಪ್ಪ, ಹೂವಣ್ಣ, ಹನುಮಂತಪ್ಪ ಎ.ಕೆ, ಅರುಣ್ ಕುಮಾರ್ ಹೆಚ್ ಸೇರಿದಂತೆ ವಿವಿಧ ಕಲಾವಿದರು, ಕಲಾ ಪ್ರೋತ್ಸಾಹಕರು ಭಾಗವಹಿಸಿದ್ದರು. 

error: Content is protected !!