ಮುಷ್ಕರದ ಕರೆಗೆ ನೌಕರರಿಂದ ಉತ್ತಮ ಸ್ಪಂದನೆ

ಮುಷ್ಕರದ ಕರೆಗೆ ನೌಕರರಿಂದ ಉತ್ತಮ ಸ್ಪಂದನೆ

ದಾವಣಗೆರೆ, ಮಾ.1- ವೇತನ ಪರಿಷ್ಕ ರಣೆ ಹಾಗೂ ಹಳೆ ಪಿಂಚಣಿ ಯೋಜನೆಗೆ ಒತ್ತಾಯಿಸಿ ಸರ್ಕಾರಿ ನೌಕರರು ಬುಧವಾರ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಮುಷ್ಕರ ನಡೆಸಿದರು. ಬೆಳಿಗ್ಗೆ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು ಬಂದ್ ಆಗಿದ್ದವು. ಸರ್ಕಾರ ಬೇಡಿಕೆಗೆ ಸ್ಪಂದಿಸಿದ ಹಿನ್ನೆಲೆಯಲ್ಲಿ ಮಧ್ಯಾಹ್ನ ನೌಕರರ ಸಂಘದ ರಾಜ್ಯಾಧ್ಯಕ್ಷರು ಮುಷ್ಕರ ಹಿಂಪ ಡೆದು ಕೇಂದ್ರ ಸ್ಥಾನದಲ್ಲಿದ್ದವರು ಕೆಲಸಕ್ಕೆ ಹಾಜರಾಗುವಂತೆ ಕರೆ ನೀಡಿದ್ದರಾದರೂ, ಈ ಕರೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿರಲಿಲ್ಲ.

ಮುಷ್ಕರ  `ಸರ್ಕಾರಿ ನೌಕರರಿಗೆ ಮಜಾ ಜನ ಸಾಮಾನ್ಯರಿಗೆ ಸಜಾ’ ಎಂಬಂತೆ ಕಂಡು ಬಂದಿದ್ದು ಚಿಗಟೇರಿ ಜಿಲ್ಲಾಸ್ಪತ್ರೆ ಆವರಣದಲ್ಲಿ. 

ಮುಷ್ಕರದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಹೊರ ರೋಗಿಗಳ ವಿಭಾಗ ತೆರೆದಿರಲಿಲ್ಲ. ಸರ್ಕಾರಿ ವೈದ್ಯರು, ನರ್ಸ್‌ಗಳು ಸೇರಿದಂತೆ ಇತರೆ ನೌಕರರೆಲ್ಲ ಕೆಲಸಕ್ಕೆ ಗೈರು ಹಾಜರಾಗಿದ್ದರು. ಇದಾವುದರ ಪರಿವೆಯೇ ಇಲ್ಲದಂತೆ ನಗರ ಸೇರಿದಂತೆ ದೂರದೂರುಗಳಿಂದ ಬಂದಿದ್ದ ಜನತೆ ಬಂದ ದಾರಿಗೆ ಸುಂಕ ವಿಲ್ಲ ಎಂಬಂತೆ ಬೇರೆ  ಆಸ್ಪತ್ರೆಗಳತ್ತ ತೆರಳುತ್ತಿದ್ದುದು ಸಾಮಾನ್ಯವಾಗಿತ್ತು. ಆದರೆ, ಗುತ್ತಿಗೆ ಆಧಾರದಲ್ಲಿರುವವರು ಕೆಲಸ ಮಾಡಿದರು. ಒಳರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಂಡರು.

ಶಾಲಾ-ಕಾಲೇಜುಗಳಲ್ಲಿ ಪಾಠಗಳು ನಡೆಯಲಿಲ್ಲ. ಶಾಲಾ ವಿದ್ಯಾರ್ಥಿಗಳಿಗೆ ಮೊದಲೇ ರಜೆ ಹೇಳಲಾಗಿತ್ತು.  ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆಗಳೂ ನಡೆಯಲಿಲ್ಲ. 

ಕಾಲೇಜು ವಿದ್ಯಾರ್ಥಿಗಳೂ ಕಾಲೇಜು ಬಳಿ ಸುಳಿಯಲಿಲ್ಲ. ಬಂದ ಕೆಲ  ವಿದ್ಯಾರ್ಥಿಗಳು ಅಲ್ಲಲ್ಲಿ ಹರಟೆ ಹೊಡೆಯುವಲ್ಲಿ ನಿರತರಾಗಿದ್ದುದು ಕಂಡು ಬಂತು. ಸರ್ಕಾರಿ ಡಿಆರ್‌ಆರ್‌ ಪಾಲಿಟೆಕ್ನಿಕ್‌ನಲ್ಲಿ ಮೌಲ್ಯಮಾಪನಕ್ಕೆ ಬಂದವರು ಹಿಂದಿರುಗಿದರು. 

ಇನ್ನು ಮಹಾನಗರ  ಪಾಲಿಕೆ, ಆರ್‌ಟಿಒ ಕಚೇರಿ, ತಹಶೀಲ್ದಾರ್ ಕಚೇರಿ, ಕಂದಾಯ ಇಲಾಖೆ ಸೇರಿದಂತೆ ಬಹುತೇಕ ಇಲಾಖೆಗಳ ಕಚೇರಿಗಳು ಬಾಗಿಲು ಮುಚ್ಚಲ್ಪಟ್ಟಿದ್ದವು. 

error: Content is protected !!