ಮಾತೃಭಾಷೆಯಿಂದಲೇ ಪ್ರಗತಿ ಪಥ

ಮಾತೃಭಾಷೆಯಿಂದಲೇ ಪ್ರಗತಿ ಪಥ

ರಷ್ಯಾ, ಜರ್ಮನಿ, ಜಪಾನ್ ಹಾಗೂ ಫ್ರಾನ್ಸ್‌ನಂತಹ ದೇಶಗಳಲ್ಲಿ ಮಾತೃಭಾಷೆಯಲ್ಲೇ ತಾಂತ್ರಿಕ ಶಿಕ್ಷಣ : ದಾವಣಗೆರೆ ವಿ.ವಿ. ಘಟಿಕೋತ್ಸವದಲ್ಲಿ ರಾಜ್ಯಪಾಲ ಗೆಹ್ಲೋಟ್‌

ದಾವಣಗೆರೆ, ಫೆ. 28 – ರಷ್ಯಾ, ಜರ್ಮನಿ, ಜಪಾನ್ ಹಾಗೂ ಫ್ರಾನ್ಸ್ ಮುಂತಾದ ಮುಂದುವರಿದ ದೇಶಗಳಲ್ಲಿ ಮಾತೃಭಾಷೆ ಯಲ್ಲಿಯೇ ತಾಂತ್ರಿಕ ಶಿಕ್ಷಣ ನೀಡಲಾಗುತ್ತಿದೆ. ಭಾರತದಲ್ಲೂ ಮಾತೃಭಾಷೆ ಮಾಧ್ಯಮದ ಮೂಲಕ ಉನ್ನತ ಶಿಕ್ಷಣದಲ್ಲಿ ವಿಕಾಸ ಆಗಬೇಕಿದೆ ಎಂದು ರಾಜ್ಯಪಾಲ ತಾವರ್‌ ಚಂದ್ ಗೆಹ್ಲೋಟ್ ಹೇಳಿದರು.

ದಾವಣಗೆರೆ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಮಾತೃಭಾಷೆಯಿಂದ ಕಲಿಕೆ ಸುಲಭ ಹಾಗೂ ತ್ವರಿತವಾಗುತ್ತದೆ. ಮಕ್ಕಳು ತಾವು ಆಡುವ ಹಾಗೂ ಸುತ್ತ ಮುತ್ತಲು ಕೇಳುವ ಭಾಷೆಯನ್ನೇ ಶಿಕ್ಷಣದಲ್ಲೂ ಬಳಸಿದಾಗ ಕಲಿಕೆಯಿಂದ ಹೆಚ್ಚು ಲಾಭ ಸಿಗುತ್ತದೆ ಎಂದು ಹೇಳಿದರು.

ಮಾತೃಭಾಷೆಯಿಂದ ಉನ್ನತ ಶಿಕ್ಷಣದಲ್ಲಿ ವಿಕಾಸ ಸಾಧ್ಯವಿದೆ. ಮಾತೃಭಾಷೆ ಬಳಸುವ ಮೂಲಕ ಸಾಂಸ್ಕೃತಿಕ ವೈಭವ ಬೆಳೆಸುವ ಜೊತೆಗೆ ವೈಜ್ಞಾನಿಕ ಶಕ್ತಿಯನ್ನು ಬೆಳೆಸುವ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕಿದೆ ಎಂದರು.

ಹಿಂದಿನಿಂದಲೂ ಭಾರತ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದು, ವಿಶ್ವಗುರು ಎನಿಸಿಕೊಡಿತ್ತು. ಚರಿತ್ರೆ ನಿರ್ಮಾಣ, ಅಧ್ಯಾತ್ಮ ಹಾಗೂ ಸರ್ವಾಂಗೀಣ ಅಭಿವೃದ್ಧಿಗಳು ಹಿಂದಿನ ಶಿಕ್ಷಣ ಪದ್ಧತಿಯಲ್ಲಿದ್ದವು. ಆಗ ಆರ್ಥಿಕ ವ್ಯವಸ್ಥೆ ಸದೃಢವಾಗಿತ್ತು. ಭಾರತ ಬಂಗಾರದ ಗಿಳಿ ಆಗಿತ್ತು ಎಂದು ರಾಜ್ಯಪಾಲರು ಹೇಳಿದರು.

ಈಗಲೂ ಅಂತಹ ಗುಣಗಳು ಹುದುಗಿವೆ. ಈಗಲೂ ಭಾರತದಲ್ಲಿ ಸಮೃದ್ಧಿ ಇದೆ. ಅವುಗಳನ್ನು ಸರಿಯಾಗಿ ಬಳಸಿ ಬೆಳವಣಿಗೆ ಹಾಗೂ ಸಮಾನತೆ ಕಾಣಬೇಕಿದೆ ಎಂದವರು ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶಿಕ್ಷಣ ನೀತಿಯಲ್ಲಿ ಪರಿವರ್ತನೆ ತಂದು ಕೌಶಲ್ಯ ಹಾಗೂ ನೈತಿಕ ಮೌಲ್ಯದೊಂದಿಗೆ ಹೊಸ ಶ್ರೇಷ್ಠ ಆತ್ಮನಿರ್ಭರ  ಭಾರತದ ಬದ್ಧತೆ ತೋರಿಸುತ್ತಿದ್ದಾರೆ. ನವ ಭಾರತ ನಿರ್ಮಾಣದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಮಹತ್ವದ ಪಾತ್ರ ಹೊಂದಿದೆ ಎಂದು ಗೆಹ್ಲೋಟ್ ಹೇಳಿದರು.

ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಹೊರ ಬೀಳುವುದನ್ನು ತಡೆಯಬೇಕಿದೆ. ಇದಕ್ಕಾಗಿ ಸಿ.ಎಸ್.ಆರ್., ಗ್ರಾಮಗಳು ಹಾಗೂ ವಿದ್ಯಾರ್ಥಿಗಳ ದತ್ತು ಸೇರಿದಂತೆ ಹಲವಾರು ಕ್ರಮಗಳ ಸಾಧ್ಯತೆ ಇದೆ ಎಂದರು.

ಕುಲಪತಿ ಪ್ರೊ.ಬಿ.ಡಿ.ಕುಂಬಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವವಿದ್ಯಾನಿಲಯವು ಹತ್ತು ಗ್ರಾಮಗಳನ್ನು ದತ್ತು ಪಡೆದುಕೊಂಡು ಬೆಳವಣಿಗೆಗೆ ನೆರವಾಗುತ್ತಿದೆ. ಪ್ರಚಾರೋಪನ್ಯಾಸ ಮಾಲೆಯಡಿ 101 ಪುಸ್ತಕಗಳ ಪ್ರಕಟಣೆಗೆ ಸಿದ್ಧತೆ ನಡೆದಿದೆ. ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಜಿಮ್‌ಖಾನಾ ಆರಭಿಸಲಾಗಿದೆ. ರಾಷ್ಟ್ರೀಯ ಉಚ್ಛತರ ಶಿಕ್ಷಣ ಅಭಿಯಾನದಡಿ ಕೇಂದ್ರ ಸರ್ಕಾರದಿಂದ 20 ಕೋಟಿ ರೂ. ಬಿಡುಗಡೆಯಾಗಿದೆ ಎಂದರು.

ಎಐಸಿಟಿಇ ಅಧ್ಯಕ್ಷ ಪ್ರೊ. ಟಿ.ಜಿ. ಸೀತಾರಾಮ್ ಘಟಿಕೋತ್ಸವ ಭಾಷಣ ಮಾಡಿದರು.

ಕುಲಸಚಿವೆ ಬಿ.ಬಿ.ಸರೋಜ, ಪರೀಕ್ಷಾಂಗ ಕುಲಸಚಿವ ಡಾ.ಕೆ.ಶಿವಶಂಕರ, ಡೀನ್‍ರಾದ ಪ್ರೊ.ರಾಮಲಿಂಗಪ್ಪ, ಪ್ರೊ.ವೆಂಕಟರಾವ್ ಪಲಾಟಿ, ಪ್ರೊ. ಜೆ.ಕೆ.ರಾಜು ಮತ್ತು ಡಾ.ಕೆ.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

ಡಾ.ಭೀಮಾಶಂಕರ ಜೋಶಿ ಮತ್ತು ಡಾ.ಮಾನಸ ಕಾರ್ಯಕ್ರಮ ನಿರೂಪಿಸಿದರು.

error: Content is protected !!