ಚಿತ್ರದುರ್ಗ, ಫೆ.28- ನಗರದ ಹೊರವಲಯದ ಧಮ್ಮಾ ಕೇಂದ್ರದಲ್ಲಿ ಬಿತ್ತನೆ ಮಾಡಲಾಗಿರುವ ಬಾಳೆತೋಟ, ಮಾವಿನತೋಟ, ತೆಂಗಿನತೋಟಕ್ಕೆ ನುಗ್ಗಿರುವ ಕರಡಿಗಳು ಗಿಡಗಳನ್ನು ನಾಶಮಾಡಿವೆ.
ಗುಡ್ಡಗಾಡು ಪ್ರದೇಶದಲ್ಲಿ ಕರಡಿಗಳಿಗೆ ಆಹಾರವಿಲ್ಲದೇ ಜನವಸತಿ ಕಡೆಗೆ ಬರುತ್ತಿದ್ದು, ತೋಟಗಳು ಮತ್ತು ಕೈದೋಟಗಳನ್ನು ನಾಶಪಡಿಸಿ, ಕುಡಿಯುವ ನೀರಿಗಾಗಿ ಮನೆಗಳ ಹತ್ತಿರಕ್ಕೆ ಬರುತ್ತಿವೆ.
ಆಹಾರ ಹುಡುಕಿಕೊಂಡು ಹೊರಡುವ ಕರಡಿಗಳಿಗೆ ಬಸವೇಶ್ವರ ಆಸ್ಪತ್ರೆಯವರು ತಂದು ಸುರಿಯುತ್ತಿರುವ ತ್ಯಾಜ್ಯ ವಸ್ತುಗಳೇ ಆಹಾರವಾಗುತ್ತಿದ್ದು, ಅವುಗಳಿಂದಾಗಿ ಕರಡಿಗಳು ಸೇರಿದಂತೆ ನರಿ, ನಾಯಿ ಮತ್ತು ಜೀವ ಸಂಕುಲನಕ್ಕೆ ಆಪಾಯ ಬರುವ ಸಾಧ್ಯತೆಗಳಿದ್ದರೂ ಸಹ ಅರಣ್ಯ ಇಲಾಖೆ ಮತ್ತು ಪರಿಸರ ಇಲಾಖೆ ಘನ ತ್ಯಾಜ್ಯ ವಿಲೇವಾರಿ ಕಡೆಗೆ ಗಮನಿಸದೇ ಮೌನ ವಹಿಸಿದೆ ಎಂದು ಧಮ್ಮಾ ಸಾಂಸ್ಕೃತಿಕ ಕೇಂದ್ರದ ಸಂಚಾಲಕ ಅರಣ್ಯ ಸಾಗರ್ ಆರೋಪಿಸಿದ್ದಾರೆ.
ಕರಡಿ ಜನವಸತಿ ಪ್ರದೇಶ ಮತ್ತು ತೋಟಗಳಿಗೆ ನುಗ್ಗಿ ಆಹಾರಕ್ಕಾಗಿ ತಡಕಾಡಿ ತೋಟಗಳನ್ನು ನಾಶಪಡಿಸುತ್ತಿದ್ದು, ಹಾಗೆಯೇ ನಾಯಿಗಳು ಘನ ತ್ಯಾಜ್ಯವನ್ನು ಬಿಟ್ಟರೆ ಬೇರೇನು ಇಲ್ಲದೇ ಜನರ ಮೇಲೆ ಎರಗುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಎಚ್ಚರಗೊಳ್ಳುತ್ತಿಲ್ಲ ಎಂದು ಸಾಗರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರಡಿ ದಾಳಿಯಿಂದ ಉಂಟಾಗಿರುವ ನಷ್ಟ ಸೇರಿದಂತೆ ಅನಾಹುತ ಕುರಿತು ಮಾಹಿತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಪದೇ ಪದೇ ತರಲಾಗುತ್ತಿದ್ದರೂ ನಮಗೆ ಸಂಬಂಧವೇ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿರುವ ಅಧಿಕಾರಿಗಳ ಧೋರಣೆಯನ್ನು ತೀವ್ರವಾಗಿ ಖಂಡಿಸಿರುವ ಅವರು, ಪ್ರಾಣಿಗಳಿಂದ ಮುಂದೆ ನಡೆಯುವಂತಹ ಅನಾಹುತಗಳನ್ನು ತಪ್ಪಿಸದೇ ಇದ್ದರೆ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದಿದ್ದಾರೆ.