17.91 ಕೋಟಿ ರೂ. ಉಳಿತಾಯ ಬಜೆಟ್

17.91 ಕೋಟಿ ರೂ. ಉಳಿತಾಯ ಬಜೆಟ್

ಪಾರಂಪರಿಕ ತ್ಯಾಜ್ಯ ವಿಲೇವಾರಿಗೆ 22 ಕೋಟಿ

ನಗರದ ಘನತ್ಯಾಜ್ಯ ವಿಲೇವಾರಿ ಜಮೀನಿ ನಲ್ಲಿ ಸುಮಾರು ವರ್ಷಗಳಿಂದ ಸಂಗ್ರಹ ವಾಗಿರುವ ಪಾರಂಪರಿಕ ತ್ಯಾಜ್ಯವನ್ನು ಬಯೋ ರೆಮಿಡಿಯೇಷನ್ ಮೂಲಕ ವಿಲೇಪಡಿಸಿ ಅಂದಾಜು 16 ಎಕರೆ ಜಾಗ ವನ್ನು ಮರು ಬಳಕೆಗೆ ಯೋಗ್ಯವಾಗಿಸುವ ಉದ್ದೇಶಕ್ಕಾಗಿ ಬಜೆಟ್ ನಲ್ಲಿ 22 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ.

ಪೌರ ಕಾರ್ಮಿಕರ ಹಿತಕಾಯಲು ಆದ್ಯತೆ

ಪೌರ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಹಾಜರಾತಿ ಸ್ಥಳದಲ್ಲಿ ಸುಸಜ್ಜಿತ ವಿಶ್ರಾಂತಿ ಗೃಹ ನಿರ್ಮಿಸಲು 50 ಲಕ್ಷ ರೂ. ಕಾಯ್ದಿರಿಸಲಾಗಿದೆ. ಪೌರ ಕಾರ್ಮಿಕರು ಕರ್ತವ್ಯಕ್ಕೆ ತೆರಳಲು ಅನುಕೂಲ ವಾಗಲು ರಾಜ್ಯ ರಸ್ತೆ ಸಾರಿಗೆ ನಿಗಮದ ಸಹಯೋಗ ದಲ್ಲಿ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ.  ಘನತ್ಯಾಜ್ಯ ನಿರ್ವಹಣೆಗಾಗಿ ಜೆಟ್ಟಿಂಗ್ ಮತ್ತು ಸಕ್ಕಿಂಗ್ ಮಷಿನ್‌ಗಳ ಖರೀದಿಗೆ 3.25 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ.

ದಾವಣಗೆರೆ, ಫೆ.21- ಮಹಾನಗರ ಪಾಲಿಕೆಯಿಂದ 2023-24ನೇ ಆರ್ಥಿಕ ವರ್ಷಕ್ಕೆ 17.91 ಕೋಟಿ ರೂ.ಗಳ ಉಳಿತಾಯ ಬಜೆಟ್ ಮಂಡಿಸಲಾಯಿತು.

ಮಂಗಳವಾರ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಮೇಯರ್ ಜಯಮ್ಮ ಆರ್. ಗೋಪಿನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲೆಕ್ಕಪತ್ರ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಸೋಗಿ ಶಾಂತಕುಮಾರ್ ಬಜೆಟ್ ಮಂಡಿಸಿದರು.

ಪಾಲಿಕೆಯ ಸ್ವಂತ ಆದಾಯ ಮೂಲಗಳಿಂದ 164.01 ಕೋಟಿ ರೂ. ಸಂಗ್ರಹ, ಸರ್ಕಾರದ ವಿವಿಧ ಯೋಜನೆ ಗಳಿಂದ 179.45 ಕೋಟಿ ರೂ. ಸೇರಿ ಒಟ್ಟು 490.63 ಕೋಟಿ ರೂ.ಗಳಲ್ಲಿ 539.98 ಕೋಟಿ ರೂ.ಗಳನ್ನು ಖರ್ಚು ಮಾಡುವ ಮೂಲಕ 17.91 ಕೋಟಿ ರೂ. ಉಳಿತಾಯ ಮಾಡುವ ನಿರೀಕ್ಷೆ ಹೊಂದಲಾಗಿದೆ. 

ಆಡಳಿತ ಪಕ್ಷದ ಸದಸ್ಯರು ಇದೊಂದು ಉತ್ತಮ ಬಜೆಟ್ ಎಂದು ಬೆನ್ನು ತಟ್ಟಿಕೊಂಡರೆ, ವಿಪಕ್ಷ ನಾಯಕರು ಹಾಗೂ ಸದಸ್ಯರು ಜನರ ಕಿವಿ ಮೇಲೆ ಹೂ ಇಡುವ ಬಜೆಟ್ ಇದಾಗಿದೆ ಎಂದು ಟೀಕಿಸಿದರು.

ಆಸ್ತಿ ತೆರಿಗೆ ಹೆಚ್ಚಳದ ಗುರಿ : ಬಜೆಟ್ ನಲ್ಲಿ ಆಸ್ತಿ ತೆರಿಗೆ ಸಂಗ್ರಹ ಹೆಚ್ಚಿಸುವ ಗುರಿ ಹೊಂದಲಾಗಿದ್ದು, ಶೇ.100ರಷ್ಟು ಆಸ್ತಿಗಳನ್ನು ತೆರೆಗೆ ವ್ಯಾಪ್ತಿಗೆ ತಂದು 30 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ.

ಕೆ.ಆರ್. ಮಾರುಕಟ್ಟೆ, ಖಾಸಗಿ ಬಸ್ ನಿಲ್ದಾಣ ಮುಂತಾದ ಕಡೆಯ ಹೊಸ ವಾಣಿಜ್ಯ ಮಳಿಗೆಗಳೂ ಸೇರಿದಂತೆ ಈಗಾಗಲೇ ಇರುವ ವಾಣಿಜ್ಯ ಮಳಿಗೆ ಹಾಗೂ ಸಮುಚ್ಛಯಗಳಿಂದ ಒಟ್ಟಾರೆ 1.15 ಕೋಟಿ ರೂ. ಆದಾಯ ಸಂಗ್ರಹದ ಗುರಿ ಹೊಂದಲಾಗಿದೆ. ನೀರು ಸರಬರಾಜು ಶುಲ್ಕದಿಂದ 5 ಕೋಟಿ, ನೀರು ಸರಬರಾಜು ಸಂಪರ್ಕ ಶುಲ್ಕದಿಂದ 10 ಲಕ್ಷ, ಒಳಚರಂಡಿ ಸಂಪರ್ಕ ಬಳಕೆದಾರರ ಶುಲ್ಕ 1.65 ಕೋಟಿ ರೂ. ನಿರೀಕ್ಷಿಸಲಾಗಿದೆ.

ಸಂತೆ ಸುಂಕ 60 ಲಕ್ಷ, ಘನತ್ಯಾಜ್ಯ ನಿರ್ವಹಣೆ ಬಳಕೆದಾರರ ಶುಲ್ಕ 5 ಕೋಟಿ ರೂ., ಕಟ್ಟಡ ಪರವಾನಗಿ ಶುಲ್ಕ 2.10 ಕೋಟಿ ರೂ., ಉದ್ದಿಮೆ ಪರವಾನಗಿ ಶುಲ್ಕ 85 ಲಕ್ಷ, ರಸ್ತೆ ಕಡಿತ ಶುಲ್ಕ 1.50 ಕೋಟಿ ರೂ., ಆಸ್ತಿಗಳ ವರ್ಗಾವಣೆ ಮೇಲಿನ ಹೆಚ್ಚುವರಿ ಅಧಿಭಾರ ಶುಲ್ಕ 60 ಲಕ್ಷ ಹಾಗೂ ಅಭಿವೃದ್ಧಿ ಶುಲ್ಕ 45 ಲಕ್ಷ ಆದಾಯ ಸಂಗ್ರಹಣೆ ಗುರಿ ಹೊಂದಲಾಗಿದ್ದು, ಇವುಗಳು ಪಾಲಿಕೆಯ ಸ್ವಂತ ಆದಾಯ ಮೂಲಗಳಾಗಿವೆ.

ಯಾವುದಕ್ಕೆ ಎಷ್ಟು ಖರ್ಚು : ಮಹಾನಗರ ಪಾಲಿಕೆ ನೌಕರರು, ಸಿಬ್ಬಂದಿಗಳ ವೇತನಕ್ಕೆ 44.85 ಕೋಟಿ ರೂ. ಅಂದಾಜಿಸಲಾಗಿದೆ. ಮೂಲ ಸೌಕರ್ಯ, ಆಸ್ತಿಗಳ ನಿರ್ವಹಣೆ ಹಾಗೂ ದುರಸ್ತಿಗೆ 4.45 ಕೋಟಿ ರೂ., ಹೊರಗುತ್ತಿಗೆ ವೆಚ್ಚಗಳಿಗೆ 15.47 ಕೋಟಿ ರೂ., ಉಗ್ರಾಣ ಸಾಮಗ್ರಿಗಳ ಖರೀದಿಗೆ 1.55 ಕೋಟಿ ರೂ.,  ಇಂಧನ ಹಾಗೂ ವಿದ್ಯುತ್ ವೆಚ್ಚಗಳಿಗಾಗಿ 43.55 ಕೋಟಿ ರೂ., ಆಡಳಿತ ನಿರ್ವಹಣೆ, ಕೌನ್ಸಲ್ ವೆಚ್ಚವಾಗಿ 3.13 ಕೋಟಿ ರೂ. ವೆಚ್ಚ ನಿಗದಿಪಡಿಸಲಾಗಿದೆ.

ವಾಚನಾಲಯ ಹಾಗೂ ಡಿಜಿಟಲ್ ಗ್ರಂಥಾಲಯ ನಿರ್ಮಾಣಕ್ಕೆ 50 ಲಕ್ಷ ರೂ.ಗಳನ್ನು ಬಜೆಟ್ ನಲ್ಲಿ ಕಾಯ್ದಿರಿಸಲಾಗಿದೆ.  ಅವೈಜ್ಞಾನಿಕ ರಸ್ತೆ ಉಬ್ಬು ತೆರವಿಗೆ ಹಾಗೂ ರಸ್ತೆ ಗುಂಡಿ ಮುಚ್ಚಲು 75 ಲಕ್ಷ ರೂ., ಶಿಥಿಲಾವಸ್ಥೆಯಲ್ಲಿರುವ ಹಾಗೂ ಹಳೆಯ ಗರಡಿ ಮನೆಗಳ ನವೀಕರಣಕ್ಕೆ 50 ಲಕ್ಷ ರೂ., ಪಾಲಿಕೆ ಮುಂಭಾಗ ಸ್ಕೈವಾಕ್ ನಿರ್ಮಾಣಕ್ಕೆ 80 ಲಕ್ಷ ರೂ., ಪುತ್ಥಳಿಗಳಿಗೆ ಸುಣ್ಣ ಬಣ್ಣ ಬಳಿಯಲು 10 ಲಕ್ಷ ರೂ., ಪೌರಕಾರ್ಮಿಕರ ಸ್ವಚ್ಛತಾ ಪರಿಕರಗಳಿಗೆ 20 ಲಕ್ಷ ರೂ. ಮೀಸಲಿಡಲಾಗಿದೆ.

ಸ್ಮಶಾನಗಳ ಅಭಿವೃದ್ಧಿಗೆ 1 ಕೋಟಿ ರೂ., ಬೀದಿ ಬದಿ ವ್ಯಾಪಾರಿಗಳಿಗೆ ವೆಂಡಿಂಗ್ ಝೋನ್ ನಿರ್ಮಾಣಕ್ಕೆ 20 ಲಕ್ಷ ರೂ., ಉದ್ಯಾನವನಗಳ ನಿರ್ವಹಣೆಗೆ 10 ಲಕ್ಷ ರೂ., ತಾರಸಿ ಉದ್ಯಾನವನಗಳಿಗಾಗಿ 5 ಲಕ್ಷ ರೂ., ಮೇಯರ್ ಕಪ್ ಕ್ರೀಡೆಗೆ 5 ಹಾಗೂ ಪೌರ ಸನ್ಮಾನ ಕಾರ್ಯಕ್ರಮಕ್ಕೆ 5 ಲಕ್ಷ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 5 ಲಕ್ಷ, ಕ್ರೀಡಾ ಚಟುವಟಿಕೆಗೆ 15 ಲಕ್ಷ ರೂ., ವಾರ್ಡ್ ನಂ.33ರಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ 55 ಲಕ್ಷ ರೂ., ಸದಸ್ಯರ ಅಧ್ಯಯನ ಪ್ರವಾಸಕ್ಕೆ 40 ಲಕ್ಷ  ರೂ.ಗಳನ್ನು ಕಾಯ್ದಿರಿಸಲಾಗಿದೆ.

ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಆಯವ್ಯಯ ಸಭೆಯಲ್ಲಿ ಉಪ ಮೇಯರ್ ಗಾಯತ್ರಿಬಾಯಿ, ಸ್ಥಾಯಿ ಸಮಿತಿ ಸದಸ್ಯರುಗಳಾದ ಸೋಗಿ ಶಾಂತಕುಮಾರ್, ಉದಯಕುಮಾರ್, ರಾಕೇಶ್ ಜಾಧವ್, ಎಸ್.ಮಂಜುನಾಥ್, ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್, ಆಯುಕ್ತರಾದ ರೇಣುಕಾ, ಪರಿಷತ್ ಕಾರ್ಯದರ್ಶಿ ಕೆ.ಜಯಣ್ಣ ಇತರರು ಈ ಸಂದರ್ಭದಲ್ಲಿದ್ದರು.

error: Content is protected !!