ಕರ್ನಾಟಕ ನವ ನಿರ್ಮಾಣ ಸೇನೆ ವಿರೋಧ
ದಾವಣಗೆರೆ, ಫೆ.21- ರಾಜ್ಯ ಸರ್ಕಾರವು ಚನ್ನಗಿರಿ ತಾಲ್ಲೂಕು ಹೊದಿಗೆರೆ ಗ್ರಾಮದ ಷಹಜಿ ಸಮಾಧಿ ಅಭಿವೃದ್ಧಿಗೆ ನೀಡಿರುವ ಹಣವನ್ನು ಮರಳಿ ಪಡೆದು ಕೆಳದಿಯ ಚೆನ್ನಮ್ಮ ಕಟ್ಟಿಸಿರುವ ಚನ್ನಗಿರಿ ಕೋಟೆ ಅಭಿವೃದ್ಧಿಗೆ ನೀಡುವಂತೆ ಕರ್ನಾಟಕ ನವ ನಿರ್ಮಾಣ ಸೇನೆ ಆಗ್ರಹಿಸಿದೆ.
ಈ ಸಂಬಂಧ ಸೇನೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ಕನ್ನಡಿಗರ ಕೆಳದಿ ಸಾಮ್ರಾಜ್ಯದ ಮೇಲೆ ದಾಳಿ ಮಾಡಲು ಬಂದು ಚನ್ನಗಿರಿಯ ಕಾಡಿನಲ್ಲಿ ಕುದುರೆ ಮೇಲಿಂದ ಬಿದ್ದು ಸಾವನ್ನಪ್ಪಿರುವ ಷಹಜಿ ಸಮಾಧಿ ಅಭಿವೃದ್ಧಿಗೆ ಸರ್ಕಾರ ಬಜೆಟ್ನಲ್ಲಿ 5 ಕೋಟಿ ಹಣ ನೀಡಿರುವ ಕ್ರಮವನ್ನು ಸೇನೆ ತೀವ್ರವಾಗಿ ಖಂಡಿಸುತ್ತದೆ.
ಕನ್ನಡದ ರಾಜ ಮನೆತನಗಳನ್ನು ಗೌರವಿಸುವುದನ್ನು ಬಿಟ್ಟು, ಕನ್ನಡದ ರಾಜಮನೆತನಗಳ ಮೇಲೆ ದಾಳಿ ಮಾಡಿದವರನ್ನು ಮತ ಬ್ಯಾಂಕ್ಗಾಗಿ ವೈಭವೀಕರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಮರಾಠ ಪೇಶ್ವೆಗಳು ಈ ನಾಡಿನ ಅನೇಕ ರಾಜಮನೆತನಗಳನ್ನು ಲೂಟಿ ಮಾಡಿದ್ದಾರೆ. ಅವರನ್ನೇ ಹೀರೋಗಳಂತೆ ಬಿಂಬಿಸಲು ಹೊರಟಿರುವುದು ದುರಂತ.
ಕರ್ನಾಟಕಕ್ಕೆ ಷಹಜಿಯ ಕೊಡುಗೆ ಶೂನ್ಯ. ಕೆಳದಿ ಸಾಮ್ರಾಜ್ಯದ ಮೇಲೆ ದಾಳಿ ಮಾಡಲು ಬಂದು ಸಾವನ್ನಪ್ಪಿದ ಷಹಾಜಿಯ ಶವವನ್ನು ಅಲ್ಲಿಯೇ ಬಿಟ್ಟು ಓಡಿ ಹೋದ ಪೇಶ್ವೆ ಸೈನಿಕರ ಹೇಡಿತನ ಇತಿಹಾಸದ ಪುಟಗಳಿಂದ ಬಚ್ಚಿಡಲು ಸಾಧ್ಯವಿಲ್ಲ. ಅನಾಥವಾಗಿ ಬಿದ್ದಿದ್ದ ಷಹಜಿ ಶವವನ್ನು ಸಂಸ್ಕಾರ ಮಾಡಿ ಮಾನವೀಯತೆ ಮೆರೆದದ್ದು ಕೆಳದಿಯ ಅರಸರು ಎಂಬ ಇತಿಹಾಸವಾದರೂ ಸರ್ಕಾರಕ್ಕೆ ಗೊತ್ತಿದೆಯಾ ?
ಕೆಳದಿ ಚೆನ್ನಮ್ಮ, ಶಿವಪ್ಪ ನಾಯಕರ ಮೇಲೆ ಇಲ್ಲದ ಶ್ರದ್ಧೆ, ಗೌರವ ಷಹಜಿಗೆ ಏಕೆ ? ಸರ್ಕಾರಕ್ಕೆ ಗೊತ್ತಿಲ್ಲ ಎನ್ನುವುದಾದರೆ ದಾಖಲೆ ಸಮೇತ ನೀಡುತ್ತೇವೆ. ನಮ್ಮ ರಾಜ-ಮಹಾರಾಜರುಗಳನ್ನು ಗೌರವಿಸುವುದನ್ನು ಬಿಟ್ಟು, ಒಣ ಶೋಕಿಗಳಿಗೆ ಕನ್ನಡಿಗರ ತೆರಿಗೆ ಹಣ ಬಳಸುವುದು ಬೇಡ. ಹಾಗಾಗಿ ಈ ಕೂಡಲೇ ಷಹಜಿ ಸಮಾಧಿ ಸ್ಥಳ ಅಭಿವೃದ್ಧಿಗೆ ನೀಡಿರುವ ಹಣವನ್ನು ಮರಳಿ ಪಡೆಯಬೇಕು ಎಂದು ನವ ನಿರ್ಮಾಣ ಸೇನೆ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಸೇನೆ ಜಿಲ್ಲಾಧ್ಯಕ್ಷ ಕೆ.ಎನ್.ವೆಂಕಟೇಶ್, ಉಪಾಧ್ಯಕ್ಷ ಶೇರ್ ಅಲಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಸಂಚಾಲಕ ಅಶ್ಫಾಕ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಜಾವೀದ್, ನಗರ ಅಧ್ಯಕ್ಷ ನಾರಾಯಣ್, ಸಂಚಾಲಕ ಆಂಜನೇಯ, ಪ್ರಧಾನ ಕಾರ್ಯದರ್ಶಿ ನವೀನ್ ಮತ್ತಿತರರು ಹಾಜರಿದ್ದರು.