ಹರಿಹರ, ಫೆ. 19- ನಗರದಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. ಐತಿಹಾಸಿಕ ಪ್ರಸಿದ್ಧ ಶ್ರೀ ಹರಿಹರೇಶ್ವರ, ನೂರಾ ಎಂಟು ಲಿಂಗೇಶ್ವರ ಸ್ವಾಮಿ, ಕುಂಬಳೇಶ್ವರ ಸ್ವಾಮಿ, ಬಸವೇಶ್ವರ ಸ್ವಾಮಿ, ಮೂಕ ಬಸವೇಶ್ವರ ಸ್ವಾಮಿ ಸೇರಿದಂತೆ ಹಲವಾರು ದೇವಸ್ಥಾನಗಳಲ್ಲಿ ಬೆಳಗ್ಗೆ ಯಿಂದಲೇ ಅಭಿಷೇಕ, ಹೋಮ ಹವನ, ಪುಷ್ಪಾರ್ಚನೆ, ಅಲಂಕಾರ, ಸಹಸ್ರನಾಮ, ಮಹಾಮಂಗಳಾರತಿ ಸೇರಿದಂತೆ ವಿಶೇಷ ಪೂಜಾ ಕಾರ್ಯಗಳನ್ನು ಮಾಡಲಾಯಿತು.
ನೂರಾ ಎಂಟು ಲಿಂಗೇಶ್ವರ ದೇವಸ್ಥಾನದಲ್ಲಿ ಸೊಲ್ಲಾಪುರ ಶ್ರೀ ಶರಣ ಬಸವಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ವಿಶೇಷ ಅಭಿಷೇಕ ಪೂಜೆ, ಸಂಜೆ ಧಾರ್ಮಿಕ ವೇದಿಕೆಯ ಕಾರ್ಯಕ್ರಮಗಳು ನಡೆದವು. ಭಕ್ತರು ದೊಡ್ಡ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಶ್ರೀ ಪಂಡಿತ ನಾರಾಯಣ ಜೋಯಿಸರು, ಹರಿಶಂಕರ್ ಜೋಯಿಸರು, ಚಿದಂಬರ ಜೋಯಿಸರು, ಶ್ರೀನಿವಾಸಮೂರ್ತಿ, ಗುರುಪ್ರಸಾದ್, ಸೇರಿದಂತೆ ಹಲವಾರು ಜೋಯಿಸರ ಸಮ್ಮುಖ ದಲ್ಲಿ ಹರಿಹರೇಶ್ವರ ಸ್ವಾಮಿಗೆ ವಿಶೇಷ ಅಭಿಷೇಕ, ಪೂಜೆ ಮಾಡ ಲಾಯಿತು. ದೇವಸ್ಥಾನದ ಆವರಣ ದಲ್ಲಿ ನೆರೆದಿದ್ದ ಭಕ್ತರಿಗೆ ಕುಡಿಯುವ ನೀರು, ಪ್ರಸಾದ ವ್ಯವಸ್ಥೆಯನ್ನು ದಾನಿಗಳು ಮಾಡಿದ್ದರು.
ಸಹಸ್ರಾರು ಸಂಖ್ಯೆಯಲ್ಲಿ ದೇವರ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು.
ಈ ವೇಳೆ ತಹಶೀಲ್ದಾರ್ ಪೃಥ್ವಿ, ಮಾಜಿ ಶಾಸಕರಾದ ಹೆಚ್.ಎಸ್. ಶಿವಶಂಕರ್, ಬಿ.ಪಿ.ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಮುಖಂಡರಾದ ಚಂದ್ರಶೇಖರ್ ಪೂಜಾರ್, ಎಂ. ನಾಗೇಂದ್ರಪ್ಪ, ದೀಟೂರು ಮಹೇಶ್ವರಪ್ಪ, ನಂದಿಗಾವಿ ಶ್ರೀನಿವಾಸ್ , ತಾಲ್ಲೂಕು ಆಡಳಿತದ ಆರ್‌ಐ ಆನಂದ್, ಸಂಗೀತ ಜೋಷಿ ಮತ್ತಿತರರು ದೇವರ ದರ್ಶನ ಪಡೆದರು.